ಮೈಸೂರು: ಭಾರತೀಯ ವೈದ್ಯಕೀಯ ಪರಿಷತ್ ಅನ್ನು ವಿಸರ್ಜಿಸಿ ಅವರ ಬದಲಾಗಿ 'ರಾಷ್ಟ್ರೀಯ ವೈದ್ಯಕೀಯ ಆಯೋಗ' ವಿಧೇಯಕವನ್ನು ಲೋಕಸಭೆಯಲ್ಲಿ ಅಂಗೀಕರಿಸಿದ್ದರಿಂದ ಬುಧವಾರ ಬೆಳಗ್ಗೆಯಿಂದಲೇ ವೈದ್ಯರು ಮುಷ್ಕರ ಮಾಡುತ್ತಿದ್ದು, ಕೆ.ಆರ್. ಆಸ್ಪತ್ರೆ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯರಿಂದ ದೇಶಾದ್ಯಂತ ಮುಷ್ಕರ... ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಕೆ ಆರ್ ಆಸ್ಪತ್ರೆ - ದೇಶಾದ್ಯಂತ ಮುಷ್ಕರ
ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದ 'ರಾಷ್ಟ್ರೀಯ ವೈದ್ಯಕೀಯ ಆಯೋಗ' (ಎನ್‌ಎಂಸಿ) ವಿಧೇಯಕ ವಿರೋಧಿಸಿ ದೇಶವ್ಯಾಪಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಷ್ಕರ ನಡೆಸುವಂತೆ ಕರೆ ನೀಡಿದೆ. ಈ ನಡುವೆಯೂ ಮೈಸೂರಿನ ಕೆ.ಆರ್ ಆಸ್ಪತ್ರೆಯ ವೈದ್ಯರು ರೋಗಿಗಳ ಕುರಿತು ಎಚ್ಚರ ವಹಿಸಿದ್ದಾರೆ.
ಎಂ.ಡಿ., ಎಂ.ಎಸ್. ಸೇರಿದಂತೆ ವೈದ್ಯಕೀಯ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಕಲಿಯುವವರು ನೀಟ್ ಪರೀಕ್ಷೆ ಎದುರಿಸುವ ಹಾಲಿ ನಿಯಮವನ್ನು ರದ್ದು ಪಡಿಸಿ, ಇದರ ಬದಲಾಗಿ ಎಂಬಿಬಿಎಸ್ ಅಂತಿಮ ಪರೀಕ್ಷೆಯ ಅಂಕ ಆಧರಿಸಿ ಪ್ರವೇಶ ನೀಡುವ ವಿಧಾನ ಅನುಸರಿಸಲು ವಿಧೇಯಕದಲ್ಲಿ ಅವಕಾಶ ಒದಗಿಸಲಾಗಿದೆ.
ಇದನ್ನು ವಿರೋಧಿಸಿ ದೇಶವ್ಯಾಪಿ ಭಾರತೀಯ ವೈದ್ಯಕೀಯ ಸಂಘ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತ ಗೊಂಡಿದೆ.
ಇನ್ನು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ 'ಈ ಟಿವಿ ಭಾರತ್' ನೊಂದಿಗೆ ಮಾತನಾಡಿದ ಕೆ.ಆರ್.ಆಸ್ಪತ್ರೆ ಅಧೀಕ್ಷಕ ಡಾ.ಬಿ.ಎಲ್.ನಂಜುಂಡಸ್ವಾಮಿ, ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವೈದ್ಯರಿಗೆ ರಜೆ ರದ್ದು ಮಾಡಲಾಗಿದೆ ಎಂದರು.