ಮೈಸೂರು:ದಸರಾ ನಿಮಿತ್ತ ಇಂದುಕಲಾಮಂದಿರಲ್ಲಿ ಕವಿಗೋಷ್ಠಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಾಹಿತ್ಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾಲ್ವಡಿ ಕೃಷ್ಣರಾಜ ಅವರ ಆಡಳಿತವು ಈಗಿನ ಸಾಹಿತ್ಯ ಚಳವಳಿಗೆ ಪ್ರೇರಣೆಯಾಗಲಿ. ಈ ಕವಿಗೋಷ್ಠಿ ವೇದಿಕೆಯಲ್ಲಿ ಸಮಾಜದ ಎಲ್ಲ ಸಮಸ್ಯೆಗಳನ್ನು ಕುರಿತು ಸುದೀರ್ಘ ಚರ್ಚೆಯಾಗಲಿ ಎಂದರು.
ಮುಂದುವರೆದು, ಸಾಹಿತ್ಯ ಕ್ಷೇತ್ರವು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಈ ಮೂಲಕ ಸಾಹಿತ್ಯ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಸಚಿವರು ಕಾರ್ಯಕ್ರಮದಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಹಾಗೇ ಮರ್ಯಾದೆ ಹತ್ಯೆಯಂತಹ ಘಟನೆಗಳು ಮಾನವ ಕುಲ ತಲೆತಗ್ಗಿಸುವಂತದ್ದು. ಈ ರೀತಿಯ ಅನಿಷ್ಟ ಪದ್ದತಿಗಳನ್ನು ವಿರೋಧಿಸುವ ಮೂಲಕ ತೊಲಗಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಭಾಷೆ ಕುರಿತು ಚಿಂತಿಸುವ ಅವಶ್ಯಕತೆ ಇದೆ- ಜಯಂತ್ ಕಾಯ್ಕಿಣಿ:ನಂತರಖ್ಯಾತ ಸಾಹಿತಿ ಹಾಗೂ ಕವಿ ಜಯಂತ್ ಕಾಯ್ಕಿಣಿ ಮಾತನಾಡಿದರು. ಸಾಹಿತ್ಯ ಎನ್ನುವಂತದ್ದು ವೈಚಾರಿಕತೆಯ ನವ ಬಾಗಿಲನ್ನು ತೆರೆಯುತ್ತದೆ. ಕನ್ನಡ ಪಾಠಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ಕೂಡ ತಮ್ಮ ಮಕ್ಕಳನ್ನು ಆಂಗ್ಲ ಪಾಠಶಾಲೆಗೆ ಸೇರಿಸುತ್ತಿರುವ ಹಂತದಲ್ಲಿ ನಾವಿದ್ದೇವೆ. ಕನ್ನಡ ಭಾಷೆ ಸಾಹಿತ್ಯದ ಕುರಿತು ಚಿಂತಿಸುವ ಅವಶ್ಯಕತೆ ನಮ್ಮ ಮುಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.