ಮೈಸೂರು:ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ, ಆರ್ಎಸ್ಎಸ್ ಸರ್ಕಾರ ಅಲ್ಲ. ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನ ಬಿಡಿ, ಮುಸ್ಲಿಮರು ನಮ್ಮವರೇ ಅಂತಾ ಸ್ಪಷ್ಟವಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇವರ ಹೇಳಿಕೆಯನ್ನ ಸ್ವಾಗತಿಸುತ್ತೇನೆ. ಈ ಮೂಲಕ ದೇಶದ, ರಾಜ್ಯದ ಆರ್ಎಸ್ಎಸ್ ಕಾರ್ಯಕರ್ತರಿಗೆ ತಿಳುವಳಿಕೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಭಾರತದ ಮುಸ್ಲಿಮರು ನಮ್ಮ ಅಣ್ಣ- ತಮ್ಮಂದಿರು ಎಂದಿದ್ದಾರೆ. ಹಲವಾರು ಪ್ರಕ್ಷುಬ್ಧತೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಭಾಗವತ್ ಹೇಳಿದ ಮೇಲೆ ನಮ್ಮ ರಾಜ್ಯದ ಯಾವೊಬ್ಬ ಆರ್ಎಸ್ಎಸ್ ಕಟ್ಟಾಳುಗಳು ತುಟಿಬಿಚ್ಚಿಲ್ಲ. ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರ್ಯಾರು ಮಾತನಾಡುತ್ತಿಲ್ಲ. ಮೋಹನ್ ಭಾಗವತ್ ಹೇಳಿಕೆಯನ್ನು ಸ್ವಾಗತಿಸಿಲ್ಲ. ಭಾಗವತ್ ಹೇಳಿದ ಮೇಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಾ ಎಂದು ವಿಶ್ವನಾಥ್ ಕಿಡಿಕಾರಿದರು.
ಆರ್ಎಸ್ಎಸ್ ಮುಖಂಡರ ವಿರುದ್ಧ ವಿಶ್ವನಾಥ್ ಆಕ್ರೋಶ:ಭಾಗವತ್ ಹೇಳಿಕೆಗೆ ಗೌರವ ಇಲ್ವಾ? ಎಲ್ಲಿದ್ಯಪ್ಪ ಪ್ರತಾಪ್ ಸಿಂಹ? ಕರ್ನಾಟಕದ ಬೆಳವಣಿಗೆಗಳಿಂದ ವಿದೇಶಗಳೂ ಭಾರತಕ್ಕೆ ಪಾಠ ಮಾಡುವ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು. ಇದು ಬಿಜೆಪಿ ಸರ್ಕಾರ, ಆರ್ಎಸ್ಎಸ್ ಸರ್ಕಾರ ಅಲ್ಲ. ನಾವು ಬೆಂಬಲ ಕೊಟ್ಟಿದ್ದು ಬಿಜೆಪಿಗೆ ಹೊರತು ಆರ್ಎಸ್ಎಸ್ಗೆ ಅಲ್ಲ. ರಾಜ್ಯದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕ್ತೀದ್ದೀರ. ನಾಚಿಕೆ ಅಗೋದಿಲ್ವಾ ಎಂದು ರಾಜ್ಯದ ಆರ್ಎಸ್ಎಸ್ ಮುಖಂಡರ ವಿರುದ್ಧ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.