ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2023ರಲ್ಲಿ ಹಲವು ಪ್ರಮುಖ ಘಟನಾವಳಿಗಳು ನಡೆದಿವೆ. ಪ್ರಮುಖವಾಗಿ ಈ ವರ್ಷ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಶ್ವ ವಿಖ್ಯಾತ ಮೈಸೂರು ದಸರಾ, ಮಾಜಿ ಸಂಸದ ಧ್ರುವ ನಾರಾಯಣ್ ನಿಧನ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಚಿರತೆ - ಹುಲಿ - ಕಾಡಾನೆ ದಾಳಿ ಸೇರಿದಂತೆ ಹಲವು ಘಟನೆಗಳು ಜರುಗಿವೆ. ಈ ವರ್ಷ ನಡೆದ ಘಟನಾವಳಿಗಳ ಹಿನ್ನೋಟ ಇಲ್ಲಿದೆ.
ಜನವರಿ -2023 : 2023ರ ಜನವರಿಯಲ್ಲಿ ಹಲವು ಪ್ರಮುಖ ಘಟನೆಗಳಿಗೆ ಮೈಸೂರು ಜಿಲ್ಲೆ ಸಾಕ್ಷಿಯಾಯಿತು. ಇದರಲ್ಲಿ ಪ್ರಮುಖವಾಗಿ ಸಿಎಫ್ಟಿಆರ್ಐನಲ್ಲಿ ಚಿರತೆ ಪ್ರತ್ಯಕ್ಷವಾಗಿ ಮೈಸೂರಿನ ಜನರು ಭಯಭೀತರಾಗಿದ್ದರು. ಚಾಮುಂಡಿ ಬೆಟ್ಟದ ದೇವಿಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆದಿದೆ. ಹೆಚ್ ಡಿ ಕೋಟೆ ಬಳಿ ಕಾಡಾನೆ ದಾಳಿಗೆ ಓರ್ವ ಬಲಿ, ಹುಲಿ ದಾಳಿಗೆ ಯುವಕನೋರ್ವ ಬಲಿಯಾಗಿದ್ದನು. ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸಿದ ಪ್ರಕರಣವೊಂದರ ಆರೋಪಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದರು. ಹಾಲಾಳುವಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿತ್ತು.
ಫೆಬ್ರವರಿ -2023 :ವಿಧಾನಸಭೆ ಚುನಾವಣೆ ಹಿನ್ನೆಲೆ ಫೆಬ್ರವರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ ಟಿ ದೇವೇಗೌಡ ಅವರು ಮಹಾಶಕ್ತಿ ಪ್ರದರ್ಶನ ಮಾಡಿದ್ದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ದರೋಡೆ ನಡೆದಿತ್ತು.
ಮಾರ್ಚ್ -2023: ಮಾರ್ಚ್ ತಿಂಗಳಲ್ಲಿ ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನರಾಗಿದ್ದು, ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳು ಹಾಕಿದ ಬೆಂಕಿಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿತ್ತು. ಸುಯೇಜ್ ಫಾರಂ ಸೇರಿ ಐದು ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದೇ ತಿಂಗಳಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯೂ ಪ್ರಾರಂಭವಾಗಿತ್ತು.
ಏಪ್ರಿಲ್ - 2023:ಎಪ್ರಿಲ್ನಲ್ಲಿ ನಂಜನಗೂಡಿನಲ್ಲಿ ಪ್ರಸಿದ್ಧ ಪಂಚ ಮಹಾರಥೋತ್ಸವ ಜರುಗಿತ್ತು. ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ನಾಲ್ವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು. ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡಿದ್ದರು. ಈ ವೇಳೆ 50ನೇ ಹುಲಿ ಸಂರಕ್ಷಿತ ಪ್ರದೇಶಗಳ ವಾರ್ಷಿಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಮೈಸೂರಿನ ರಾಜಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ವಿ. ಸೋಮಣ್ಣ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಎರಡು ಕಡೆ ಸ್ಫರ್ಧೆ ಮಾಡಿ ಸೋತಿದ್ದರು. ಹೂಟಗಳ್ಳಿ ಬಳಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ನಡೆದಿತ್ತು.
ಮೇ - 2023:ಮೇ ತಿಂಗಳಲ್ಲಿ ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅಸ್ವಸ್ಥಗೊಂಡು ಅಸುನೀಗಿತ್ತು. ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಿದ್ದರು. ವರುಣಾದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಟರು ಭಾಗವಹಿಸಿದ್ದರು. ನಂಜನಗೂಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆ ಚುನಾವಣಾ ಪ್ರಚಾರ ನಡೆಸಿದ್ದರು. ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದರು. ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ತಿ.ನರಸೀಪುರದ ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬಳ್ಳಾರಿ ಮೂಲದ 10 ಮಂದಿ ಸಾವನ್ನಪ್ಪಿದ್ದರು.
ಜೂನ್ -2023: ಈ ತಿಂಗಳಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಿದ್ಧಾರ್ಥ ಲೇಔಟ್ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ನಡೆದಿತ್ತು. ದೇವಿಯನ್ನು ನೋಡಲು ಬೆಟ್ಟದಲ್ಲಿ ಜನಸಾಗರವೇ ನೆರೆದಿತ್ತು.
ಜುಲೈ - 2023: ಈ ತಿಂಗಳಲ್ಲಿ ಮೈಸೂರು ಸಾಹಿತ್ಯೋತ್ಸವಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದ್ದರು. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. ಟಿ.ನರಸೀಪುರ ತಾಲ್ಲೂಕಿನ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿತ್ತು. ಮೈಸೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು.