ಮೈಸೂರು:ಉಪ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧದ ನಡುವೆಯೂ ಮದ್ಯ ಮಾರಾಟ ಮಾಡಿದ ಮೂವರು ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಪ ಚುನಾವಣೆ ಹಿನ್ನೆಲೆ ಎರಡು ದಿನಗಳ ಕಾಲ ಮದ್ಯದಂಗಡಿ ತೆರೆಯವುದು ಹಾಗೂ ಮಾರಾಟಕ್ಕೆ ನಿಷೇಧವಿದೆ. ಆದರೂ ಹುಣಸೂರು ತಾಲೂಕಿನ ನೇರಳಕುಪ್ಪೆ ಹಾಡಿಯಲ್ಲಿ ಆದಿವಾಸಿಗಳು ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಹುಣಸೂರು ಗ್ರಾಮಾಂತರ ಠಾಣೆಗೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಅಕ್ರಮ ಮದ್ಯ ಮಾರಾಟ: ಹುಣಸೂರಲ್ಲಿ ಮೂವರು ಪೊಲೀಸ್ ವಶಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ:
ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಹುಣಸೂರು ಪಟ್ಟಣದ ಕರಿಗೌಡ ಬೀದಿಯ ಬೂತ್ ಬಳಿ ನಡೆದಿದೆ. ಪಟ್ಟಣದ ಮತಗಟ್ಟೆ 111, 112 ಮತ್ತು 113ರ ಮುಂಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ದೂರ ಕಳುಹಿಸಲು ಮುಂದಾದರು ಎನ್ನಲಾಗಿದೆ. ಆಗ ನೀವು ತಾರತಮ್ಯ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.