ಮೈಸೂರು: ನೀವು ಸಿಎಂ ರೇಸ್ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಆ ಸಮಯ ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ ಎಂಬ ಮಾರ್ಮಿಕ ಉತ್ತರ ನೀಡುವ ಮೂಲಕ ನಾನು ಸಿಎಂ ರೇಸ್ನಲ್ಲಿ ಇದ್ದೇನೆ ಎಂದು ಪರೋಕ್ಷವಾಗಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ಡಾ. ಜಿ. ಪರಮೇಶ್ವರ್ ಮಾತನಾಡಿದ್ದಾರೆ ಇಂದು ಸುತ್ತೂರು ಮಠಕ್ಕೆ ಆಗಮಿಸಿದ ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಶ್ರೀಗಳ ಆರ್ಶೀವಾದ ಪಡೆದು ನಾನು ಯಾವುದೇ ರಾಜಕೀಯ ಉದ್ದೇಶದಿಂದ ಮಠಕ್ಕೆ ಬಂದಿಲ್ಲ. ಶ್ರೀಗಳ ಪೂರ್ವಾಶ್ರಮದ ತಾಯಿ ತೀರಿಕೊಂಡಿದ್ದರು. ಆದ್ದರಿಂದ ಶ್ರೀಗಳನ್ನು ಮಾತನಾಡಿಸಲು ಬಂದಿದ್ದೆ ಎಂದ ಅವರು, ಅಭಿಮಾನಿ ಒಬ್ಬ ನನ್ನನ್ನು ಭಾವಿ ಮುಖ್ಯಮಂತ್ರಿ ಎಂದು ಕೂಗಿದ್ದಾನೆ. ಅವನಿಗೆ ಆ ರೀತಿ ಕೂಗಬೇಡ ಎಂದು ಹೇಳಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ನಂತರ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಈಗ ಮುಂದಿನ ಸಿಎಂ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಇನ್ನೂ ಚುನಾವಣೆ 2 ವರ್ಷ ಇದೆ. ಮೊದಲು ಬಿಜೆಪಿ ಸರ್ಕಾರವನ್ನು ಕಿತ್ತುಹಾಕಬೇಕು. ನಂತರ ಕಾಂಗ್ರೆಸ್ ಬಹುಮತ ಪಡೆಯಲು ನಾವೆಲ್ಲಾ ಗೆಲ್ಲಬೇಕು. ಬಹುಮತ ಬಂದಮೇಲೆ ಶಾಸಕಾಂಗ ಸಭೆ ನಡೆಸಿ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲಾ ಬದ್ದರಾಗಿರುತ್ತೇವೆ. ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ಕಾಂಗ್ರೆಸ್ ನಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರು ಮುಖ್ಯಮಂತ್ರಿ ಆಗುವುದು ವಾಡಿಕೆ. ಆದರೆ ಕೆ.ಪಿ.ಸಿ.ಸಿ ಅಧ್ಯಕ್ಷನಾಗಿದ್ದಾಗ ನಾನು ಸೋತೆ. ಬೇರೆಯವರು ಮುಖ್ಯಮಂತ್ರಿಯಾದರು ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಕೂಗಿಗೆ ಪರೋಕ್ಷ ಟಾಂಗ್ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದವೆ. ಬಿಜೆಪಿ ನಾಯಕರು, ಕಾರ್ಯಕರ್ತರು ತಾವೇ ಕೋವಿಡ್ ವ್ಯಾಕ್ಸಿನ್ ತಯಾರಿಸಿ ಹಂಚುತ್ತಿದ್ದೇವೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬೇಕಿದ್ದರೆ ತಮ್ಮ ಹಣದಲ್ಲಿ ಹಂಚಿ ಪ್ರಚಾರ ಪಡೆಯಲಿ, ಅದನ್ನು ಬಿಟ್ಟು ಸರ್ಕಾರದ ಈ ರೀತಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದು ಹೇಳಿದರು.
ಓದಿ:ರಾಜ್ಯದಲ್ಲಿ Delta ಪ್ಲಸ್ ರೋಗದಿಂದ ವ್ಯಕ್ತಿ ಸಂಪೂರ್ಣ ಗುಣಮುಖ: ಮುಖ್ಯ ಆಯುಕ್ತ ಗೌರವ್ ಗುಪ್ತಾ