ಮೈಸೂರು: ಕೋವಿಡ್ ಪರೀಕ್ಷೆಗೆ ಒಳಗಾದವರು ಪಾಸಿಟಿವ್ ವರದಿ ಬಂದ ತಕ್ಷಣ ತಮ್ಮ ಮೊಬೈಲ್ ಫೋನ್ ಸ್ವಿಚ್ ಮಾಡಿಕೊಳ್ಳುತ್ತಿದ್ದು, ಇದರಿಂದ ಸೋಂಕಿತರನ್ನು ಹುಡುಕುವುದು ಕಷ್ಟವಾಗಿದೆ. ಆದ್ದರಿಂದ ಇನ್ನು ಮುಂದೆ ಈ ರೀತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರೆ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಇಂದು ಕೆಆರ್ ಕ್ಷೇತ್ರದ ಕೋವಿಡ್ ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹೆಚ್ಚು ಹೆಚ್ಚು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಈ ಮಧ್ಯೆ ಜನರು ಸಹ ಕೋವಿಡ್ ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಹಾಜರಾಗುತ್ತಿಲ್ಲ. ಅಲ್ಲದೇ ಪರೀಕ್ಷೆಗೆ ಬಂದ ವ್ಯಕ್ತಿಗಳು ಪರೀಕ್ಷಾ ಸಮಯದಲ್ಲಿ ಮೊಬೈಲ್ ನಂಬರ್ ನೀಡಿದ್ದು, ಪರೀಕ್ಷಾ ವರದಿ ಪಾಸಿಟಿವ್ ಬಂದ ತಕ್ಷಣ ಶೇ. 10 ಮಂದಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸೋಂಕಿತರನ್ನು ಹುಡುಕುವುದು ಕಷ್ಟವಾಗಿದ್ದು, ಪೊಲೀಸರಿಗೆ ಇವರ ಮೊಬೈಲ್ ಲೋಕೇಷನ್ ಹುಡುಕಿ, ಅರಿವು ಮೂಡಿಸಲು ತಿಳಿಸಲಾಗಿದೆ. ಅದಕ್ಕೆ ಒಪ್ಪದೆ ಇದ್ದಾಗ ಅವರ ವಿರುದ್ಧ ಎಫ್ಐಆರ್ (FIR) ಹಾಕಿ ಎಂದು ಪೊಲೀಸರಿಗೆ ಹೇಳಿದ್ದೇನೆ ಎಂದು ತಿಳಿಸಿದರು.