ಮೈಸೂರು:''ಅಪಘಾತಗಳು ಉಂಟಾಗಲು ಇರುವ ಕಾರಣಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತ ಪ್ರಕರಣಗಳಿಂದ ಆಗುವ ಸಾವು, ನೋವುಗಳನ್ನು ಕಡಿಮೆ ಮಾಡಬೇಕು'' ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ''ಹೆಲ್ಮೆಟ್ ಧರಿಸದೇ ಇರುವುದು, ಸೀಟ್ ಬೆಲ್ಟ್ ಹಾಕದೇ ಇರುವುದು, ಅಜಾಗರೂಕತೆಯಿಂದ ಚಾಲನೆ ಹಾಗೂ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುವುದು, ಚಾಲಕರ ನಿರ್ಲಕ್ಷ್ಯ, ರಸ್ತೆಗಳ ದುರಸ್ತಿ ಅಥವಾ ಸರಿಯಾಗಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ಅಪಘಾತಗಳಿಗೆ ಕಾರಣವಾಗಬಹುದು. ಈ ರೀತಿಯ ನಿಯಮಗಳ ಉಲ್ಲಂಘನೆಗಳನ್ನು ವಾಹನ ಚಾಲಕರು ಮಾಡಬಾರದು'' ಎಂದು ತಿಳಿಸಿದರು.
ಏನಿದು ಬ್ಲ್ಯಾಕ್ ಸ್ಪಾಟ್?:ನಗರದ ದೊಡ್ಡ ಆಲದ ಮರ, ವರಕೂಡು ಗೇಟ್, ಮೈಸೂರು ಹುಣಸೂರು ರಸ್ತೆ ಹಿನಕಲ್ ಜಂಕ್ಷನ್, ಬಂಡಿಪಾಳ್ಯ, ನಂಜನಗೂಡು ಎಪಿಎಂಸಿ ಹಾಗೂ ನಗರದ ಜೆ.ಎಲ್.ಬಿ. ರಸ್ತೆ ಜಂಕ್ಷನ್ಗಳಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇವುಗಳನ್ನು ಬ್ಲ್ಯಾಕ್ ಸ್ಪಾಟ್ಗಳಾಗಿ ಗುರುತಿಸಲಾಗಿದೆ. ಹೆಚ್ಚು ಅಪಘಾತ ಆಗುತ್ತಿರುವ ವಲಯಗಳನ್ನು ಗುರುತಿಸಿ ಎಚ್ಚರಿಕೆ ಬೋರ್ಡ್ಗಳನ್ನು ಹಾಕಬೇಕು. ಈ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಚಾಲಕರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು'' ಎಂದು ತಿಳಿಸಿದರು.