ಮೈಸೂರು:ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ಗಾಗಿ ಆದ್ಯತೆ ನೀಡಲಾಗುತ್ತಿದೆ. ಆದರೆ ನಾನು ಜನರಿಗೋಸ್ಕರ ಕೆಲಸ ಮಾಡುತ್ತೇನೆ, ಕ್ರೆಡಿಟ್ಗಾಗಿ ಅಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ಮೈಸೂರಿನ ರೈಲ್ವೆ ಕಚೇರಿಗೆ ಆಗಮಿಸಿ ರೈಲ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಜನರಿಗೋಸ್ಕರ ಕೆಲಸ ಮಾಡುತ್ತಿದ್ದು, ಕ್ರೆಡಿಟ್ಗಾಗಿ ಅಲ್ಲ. ಈ ಮಧ್ಯೆ ನಾನು ಮಾಡಿರುವ ಕೆಲಸವನ್ನು ಮಾಡಿಲ್ಲ ಎಂದಾಗ ಸುಮ್ಮನಿರಲು ಸಾಧ್ಯವಿಲ್ಲ. ಜನ ವಿಶ್ವಾಸವಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಯಾವುದೇ ಕ್ರೆಡಿಟ್ ತೆಗೆದುಕೊಳ್ಳಲು ಕೆಲಸ ಮಾಡುವುದಿಲ್ಲ. ನಿಜ ಹೇಳಲು ಭಯ ಏಕೆ? ಕ್ರೆಡಿಟ್ ವಾರ್ ಅನ್ನ ಯಾರು ಆರಂಭ ಮಾಡಿದ್ದಾರೋ ಅವರು ತಮ್ಮ ಜವಾಬ್ದಾರಿ ಬಗ್ಗೆ ತಿಳಿಯಬೇಕು. ಇನ್ನೊಬ್ಬರ ಕ್ರೆಡಿಟ್ನ್ನು ಪಡೆಯಲು ಬರಬಾರದು ಎಂದು ಪರೋಕ್ಷವಾಗಿ ತಮ್ಮ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಮಂಡ್ಯ ಜಿಲ್ಲೆಯ ಮುಖಂಡರಿಗೆ ತಿರುಗೇಟು ನೀಡಿದರು.
ನಾನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ಶಿಂಷಾ ನದಿಗೆ ಸೇತುವೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ನಾನು ಹೋಗಿದ್ದೆ, ಈ ಸಂಬಂಧ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನ ಭೇಟಿ ಮಾಡಿ ಮನವಿ ಸಹ ಮಾಡಿದ್ದೇನೆ. ಆದರೆ ಈ ವಿಚಾರದಲ್ಲಿ ಮಾಜಿ ಪ್ರಧಾನಿಗಳು ಅಥವಾ ಬೇರೆಯವರು ಪತ್ರ ಬರೆದಿರಬಹುದು. ಇದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಆದರೆ ನಾನು ಏನೇ ಮಾಡಿದರೂ ಕೆಲವರು ವಿರೋಧ ಮಾಡಲೇಬೇಕೆಂದು ನಿರ್ಧರಿಸಿದ್ದಾರೆ. ಎಲ್ಲಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ, ಜನ ನನ್ನ ಪರವಾಗಿ ಮಾತನಾಡುತ್ತಾರೆ ಎಂಬ ಭಯ ಇದೆ ಎಂದರು.