ಮೈಸೂರು:''ಜೆಡಿಎಸ್- ಬಿಜೆಪಿ ಮೈತ್ರಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಆದರೆ, ಎರಡು ಬಾರಿ ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ಮೈಸೂರು - ನಂಜನಗೂಡು ರಸ್ತೆಯ ಅಗಲೀಕರಣದ ಸಂಬಂಧ, ಜೆಎಸ್ಎಸ್ ಕಾಲೇಜಿನ ಬಳಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪಕ್ಷದ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ. ಮೈತ್ರಿಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಎರಡು ಬಾರಿ ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನ ನನಗೆ ಮತ ಕೊಡುತ್ತಾರೆ. ನಾನು ಮುಂದಿನ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಲೀಡ್ನಿಂದ ಗೆದ್ದೇ ಗೆಲ್ಲುತ್ತೇನೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ'' ಎಂದು ಅವರು, ಮುಂದಿನ ಚುನಾವಣೆಯಲ್ಲಿ ನನಗೇ ಟಿಕೆಟ್, ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಯಡಿಯೂರಪ್ಪ ನಮ್ಮ ನಾಯಕರು:''ಏಕಾಂಗಿಯಾಗಿ ರಾಜ್ಯದ ಪ್ರವಾಸ ಮಾಡಿ, ಪಕ್ಷ ಕಟ್ಟಿದವರು ಯಡಿಯೂರಪ್ಪ ಅವರು. ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಏನೇ ತೀರ್ಮಾನ ಮಾಡಿದರೂ ಪಕ್ಷದ ಒಳಿತಿಗಾಗಿ ಮಾಡಿರುತ್ತಾರೆ. ರಾಜ್ಯದ ಜನ ಕಳೆದ 40 ವರ್ಷಗಳಿಂದ ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಸರ್ಕಾರವನ್ನು ಬದಲಿಸುತ್ತಾ ಬಂದಿದ್ದಾರೆ. 2004ರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಬೆಂಬಲ ಸಿಕ್ಕೆ ಸಿಗುತ್ತದೆ'' ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.