ಮೈಸೂರು: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳಿ, ನಮ್ಮ ಹೈಕಮಾಂಡ್ ಭೇಟಿ ಮಾಡುವೆ. ಅಲ್ಲಿ ಮಾತುಕತೆ ನಡೆಸಿದ ಬಳಿಕ ನನ್ನ ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಶನಿವಾರ ಮೈಸೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಮೊದಲು ಹೇಳಿದಂತೆ ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವೆ. ಕಾರ್ತಿಕ ಮಾಸ ಮುಗಿದು ಇಂದಿನಿಂದ ಧನುರ್ಮಾಸ ಆರಂಭವಾಗುತ್ತಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುವೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಆ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವೆ. ಭೇಟಿ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಸಹ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ನಿಮ್ಮ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣರಾದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಸೋಮಣ್ಣ, ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂಬುದನ್ನು ಪದೇ ಪದೆ ಮಾತನಾಡಬಾರದು. ಸೋಲಿಗೆ ಯಾರು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಪದೇ ಪದೆ ಆ ವಿಚಾರವನ್ನು ಪ್ರಸ್ತಾಪ ಮಾಡುವುದು ಬೇಡ ಎಂದರು.
ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ: ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತದೋ ಅದನ್ನು ನಿಭಾಯಿಸುವೆ ಎಂದಷ್ಟೇ ಹೇಳಿದರು. ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರಿಗೆ ಪಕ್ಷದ ಮುಖಂಡರು ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ. ಅದಕ್ಕಾಗಿ ಅವರು ಹೋಗಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಬರುವುದಕ್ಕೂ ಮುನ್ನ ಇಬ್ಬರು ಮೊದಲು ಕಾಂಗ್ರೆಸ್ನಲ್ಲಿ ಇದ್ದವರು. ಔತಣಕೂಟಕ್ಕೆ ಹೋದ ತಕ್ಷಣ ಮತ್ತೆ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬುದರಲ್ಲಿ ಅರ್ಥವಲ್ಲ ಎಂದರು.