ಮೈಸೂರು :ಆರ್‌ಆರ್‌ಎಸ್, ಹಿಂದೂ ಮಹಾಸಭಾ ಸಂವಿಧಾನ ವಿರೋಧಿಗಳು.ಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಿ.ನರಸೀಪುರ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಕುರುಬರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೇ ವೇಳೆ ನಾನು ಬದುಕಿರುವವರೆಗೂ ಆರ್‌ಎಸ್‌ಎಸ್ ವಿರೋಧಿಸುತ್ತೇನೆ ಎಂದರು.
ನನಗೆಅಧಿಕಾರ ಇರಲಿ, ಹೋಗಲಿ. ನಾನು ಬದುಕಿರುವವರೆಗೂ ಆರ್‌ಎಸ್‌ಎಸ್ ವಿರೋಧ ಮಾಡುತ್ತೇನೆ. ಅಧಿಕಾರಗೊಸ್ಕರ ನಾನು ರಾಜಕೀಯ ಮಾಡೋಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ಯಾಕೆ ಬಿಟ್ಟರು? ಹಿಂದೂ ಆಗಿ ಹುಟ್ಟಿಯೂ ಅವರಿಗೆ ದಲಿತ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸುಧಾರಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬೌದ್ಧ ಧರ್ಮ ಸ್ವೀಕರಿಸಿದರು. ಆರ್ಎಸ್ಎಸ್ನವರಿಗೆ ಮನುಸ್ಮೃತಿ ಆಧಾರದ ಸಂವಿಧಾನ ಬೇಕು ಎಂದು ಕಿಡಿಕಾರಿದರು.
ಎಲ್ಲರೂ ಸಮಾನರು ಅಂತಾನೇ ಬಸವಣ್ಣ ಅನುಭವ ಮಂಟಪ ಮಾಡಿದರು. ಯಾವ ಧರ್ಮದಲ್ಲಿ ಮನುಷ್ಯ ಮನುಷ್ಯನನ್ನು ವಿರೋಧ ಮಾಡು ಅಂತ ಹೇಳುತ್ತೆ? ನಾನು ಒಬ್ಬ ಹಿಂದೂ. ನನ್ನನ್ನು ಯಾಕೆ ವಿರೋಧ ಮಾಡುತ್ತಾರೆ. ವಿದ್ಯಾವಂತ ಯುವಕರು ಭಾರತ ಸಂವಿಧಾನವನ್ನು ಓದಬೇಕು. ಮುಖ್ಯವಾಗಿ ಅಂಬೇಡ್ಕರ್ ಅವರನ್ನು ಪಾಲನೆ ಮಾಡಬೇಕು ಎಂದರು.