ಮೈಸೂರು :ನಾನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ನನ್ನನ್ನು ಮತ್ತೆ ಒತ್ತಾಯ ಮಾಡಬೇಡಿ. ಇದನ್ನು ಮೊದಲು ತಲೆಯಿಂದ ತೆಗೆದುಹಾಕಿ. ನನ್ನನ್ನು ಖುಷಿಪಡಿಸಲೂ ಹೀಗೆ ಮಾತನಾಡಬೇಡಿ. ''That is very very clear'' ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸುವ ಮೂಲಕ ಬೇರೆ ವಿಧಾನಸಭಾ ಕ್ಷೇತ್ರದತ್ತ ಮುಖಮಾಡಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಮುಂಚೂಣಿ ಘಟಕಗಳಿಗೆ ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ. ವರುಣಾ, ಬಾದಾಮಿ, ಕೋಲಾರ, ಹುಣಸೂರು, ಕೊಪ್ಪಳದಲ್ಲಿ ನನ್ನನ್ನು ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಆದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ನಾನು ಇನ್ನೂ ತೀರ್ಮಾನ ಮಾಡಿಲ್ಲ. ಈ ಬಳಿಕ ನನಗೆ ಯಾವ ಹುದ್ದೆ ನೀಡಿದರೂ ನಾನು ಸ್ವೀಕರಿಸಲ್ಲ. 2023ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಸ್ಪರ್ಧೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಐದು ಬಾರಿ ಗೆಲ್ಲಿಸಿದ್ದು, ಮೂರು ಬಾರಿ ಸೋಲಿಸಿದ್ದಾರೆ. ಈ ಬಗ್ಗೆ ನನಗೆ ಮತದಾರರ ಮೇಲೆ ಕೋಪ ಇಲ್ಲ. ಕಾರ್ಯಕರ್ತರ ಮೇಲೆಯೇ ಕೋಪ. ಲಿಂಗಾಯತರನ್ನು ಒಡೆದ, ಮೇಲ್ವರ್ಗದವರ ವಿರೋಧಿ, ಸದಾಶಿವ ಆಯೋಗ ಜಾರಿ ಮಾಡಲಿಲ್ಲ ಎಂದು ಬಿಂಬಿಸಿ ನಮ್ಮವರೇ ಅಪಪ್ರಚಾರ ಮಾಡಿದರು ಎಂದು ಹೇಳಿದರು. ನಾನು ಬಾದಾಮಿಗೆ ಎರಡೇ ದಿನ ಹೋಗಿದ್ದು. ಆದರೂ ಅಲ್ಲಿ ನನ್ನನ್ನು ಗೆಲ್ಲಿಸಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಮಾಡಿದಷ್ಟು ಅಭಿವೃದ್ಧಿ ಕೆಲಸ ಬೇರೆ ಯಾರೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.