ಮೈಸೂರು :ನೂತನವಾಗಿ ರಚನೆಯಾಗಿರುವ ನಮ್ಮ ಕಾಂಗ್ರೆಸ್ ಸಚಿವ ಸಂಪುಟ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನನಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಖಾತೆಯ ಬಗ್ಗೆ ಏನು ಬೇಸರ ಇಲ್ಲ. ನನಗೆ ಇದೇ ಖಾತೆ ಬೇಕೆಂದು ಯಾವಾಗಲೂ ಕೇಳಿಲ್ಲ. ಕೊಟ್ಟಿರುವ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಎಚ್.ಸಿ.ಮಹಾದೇವಪ್ಪ ಅವರಿಗೆ ಬೆಂಬಲಿಗರು, ಹಿತೈಷಿಗಳು ನಗರದ ಹುಣಸೂರಿನ ರಸ್ತೆಯಲ್ಲಿರುವ ಹೊಸ ಜಲದರ್ಶಿನಿ ಅತಿಥಿ ಗೃಹಕ್ಕೆ ಆಗಮಿಸಿಸದಸು, ಸಚಿವರಿಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಅಭಿನಂದನೆಯನ್ನು ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಸಿ ಮಹಾದೇವಪ್ಪ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು. ಎಲ್ಲೆಡೆ ಭ್ರಷ್ಟಾಚಾರ, ದುರಾಡಳಿತ ಇತ್ತು. ಇದರಿಂದ ಬೇಸತ್ತು ಜನರು ಬಿಜೆಪಿಯನ್ನು ತಿರಸ್ಕಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಹಾಗಾಗಿ ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಅವರ ನಿರೀಕ್ಷೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಇದೇ ಖಾತೆ ಬೇಕೆಂದು ಕೇಳಿಲ್ಲ :ನನಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಬೇಸರ ಇಲ್ಲ, ನನಗೆ ಇದೇ ಖಾತೆ ಬೇಕೆಂದು ಕೇಳಿಲ್ಲ. ಯಾವ ಖಾತೆಯಾದರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಕಳೆದ ಮೂರು ವರ್ಷಗಳಿಂದ ಎಸ್ಸಿ, ಎಸ್ ಟಿ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೇ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಯ ಪ್ರವೇಶ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ಇದನ್ನು ನಾವು ಮುಂದಿನ ದಿನಗಳಲ್ಲಿ ಸರಿ ಪಡಿಸುವ ಕೆಲಸ ಮಾಡುತ್ತೇವೆ ಎಂದು ಸಚಿವರು ವಾಗ್ದಾಳಿ ನಡೆಸಿದರು.