ಮೈಸೂರು :ನಾನು ಮುಖ್ಯಮಂತ್ರಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದೆ, ನನ್ನ ಸೋಲು ಸರಿಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೇಸರವನ್ನ ಮತ್ತೆ ಹೊರ ಹಾಕಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ನಾನು ಇನ್ನೂ ಸೋಲಿನಿಂದ ಆಚೆ ಬಂದಿಲ್ಲ. ನಾನು ಸಿಎಂ ಆಗಿ ಚುನಾವಣೆಗೆ ಸ್ಪರ್ಧಿಸಿದ್ದೆ. ನನ್ನ ಸೋಲು ಸರಿಯೇ? ಒಳ್ಳೆಯ ಕೆಲಸ ಮಾಡಿದರೂ, ಸೋಲಿಸಿದರು ಎಂದು ನೋವನ್ನು ಹೊರ ಹಾಕಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಷ್ಟೊಂದು ಮಂದಿ ಕಾಂಗ್ರೆಸ್ ಬೆಂಬಲಿತರು ಗೆಲ್ತಾರೆ ಅಂದುಕೊಂಡಿರಲಿಲ್ಲ. ಯಾಕಂದ್ರೆ, ಚಾಮುಂಡೇಶ್ವರಿ ಸೋಲಿನಿಂದ ನಾನು ಹೊರ ಬಂದಿಲ್ಲ. ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಈ ಕ್ಷೇತ್ರದಿಂದ. ಪಕ್ಷೇತರನಾಗಿ ಸ್ಪರ್ಧಿಸಿದಾಗ ಆಶೀರ್ವಾದ ಮಾಡಿ ಆರಿಸಿ ಕಳುಹಿಸಿದ್ರು. ಎಲ್ಲಿ ಆರಂಭವಾಯ್ತೋ ಅಲ್ಲೇ ಮುಕ್ತಾಯ ಮಾಡೋಣ ಅಂತಾ ಚಾಮುಂಡೇಶ್ವರಿಯಲ್ಲಿ ನಿಂತೆ.
ಗೆದ್ದಿದ್ರೆ ಮತ್ತೆ ಚುನಾವಣೆಗೆ ನಿಲ್ತಿರಲಿಲ್ಲ. ಈಗ ಮತ್ತೆ ನಿಲ್ಲಬೇಕೋ ಬೇಡವೋ ಯೋಚನೆ ಮಾಡುತ್ತಿದ್ದೇನೆ. ನನಗೂ 73 ವರ್ಷ ಆಗಿದೆ. ಮೊದಲ ಎಲೆಕ್ಷನ್‌ಗೆ ನಿಂತು ಈವರೆಗೆ 38 ವರ್ಷ ಕಳೆದಿದೆ ಎಂದರು.
ವಿ ಆರ್ ನಂಬರ್ ಒನ್ :ಗ್ರಾಪಂ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಇದರ ಮುನ್ಸೂಚನೆ ಏನಂದ್ರೆ, ಮುಂದಿನ ಅಸೆಂಬ್ಲಿಯಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಬಹುಮತ ಪಡೆಯುತ್ತೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೇಲ್ಜಾತಿ ವಿರೋಧಿ ಅಂತಾ ಅಪಪ್ರಚಾರ ಮಾಡಿದ್ರು. ನಾನು ಸತ್ಯ ಹೇಳುತ್ತೇನೆ, ನಾನು ಯಾವ ಜಾತಿ ವಿರೋಧಿ ಅಲ್ಲ.
ಶೋಷಿತ ವರ್ಗಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೆ ಅಷ್ಟೇ.. ಉಚಿತ ಅಕ್ಕಿ, ಸಾಲಮನ್ನಾ, ಶೂ, ಹಾಲು, ಇಂದಿರಾ ಕ್ಯಾಂಟೀನ್ ಕೇವಲ ಒಂದು ವರ್ಗಕ್ಕೆ ಸೀಮಿತ ಮಾಡಿದ್ನಾ?. ಸಾಲ ಮನ್ನಾ ಅತಿ ಹೆಚ್ಚು ಯಾರಿಗೆ ಉಪಯೋಗವಾಗಿದ್ದು?. ಮತ್ತೆ ಯಾಕೆ ಸಿದ್ದರಾಮಯ್ಯ ಮೇಲ್ಜಾತಿ ವಿರೋಧ ಅಂತಾರೆ.
ಸುಖಾ ಸುಮ್ಮನೆ ಅಪಪ್ರಚಾರ ಮಾಡಿದ್ರು ಎಂದ ಅವರು, ಆಯ್ಕೆಯಾಗಿರುವ ಸದಸ್ಯರು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಜೆಪಿಯವ್ರು ಕರೆದ್ರೆ ಹೋಗಬಾರದು. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಪಂ ಸದಸ್ಯರು ಗೆದ್ದಿರೋದು ನಾವೇ. ವಿ ಆರ್ ನಂಬರ್ ಒನ್ ಎಂದರು.
ಜಯದೇವರಾಜ್ ಅರಸ್ ವಿರುದ್ಧ ಯಾರು ಅಭ್ಯರ್ಥಿ ಇಲ್ಲ ಅಂತಾ ನನ್ನನ್ನ ಕಣಕ್ಕಿಳಿಸಿದ್ರು. ಹಣ ಇಲ್ಲ ಎಂದಾಗ ಅವರೇ ಖರ್ಚು ಮಾಡಿ ಗೆಲ್ಲಿಸಿದ್ರು. ಈಗ ಅಂತಹ ಸ್ಥಿತಿ ಇದ್ಯೇನ್ರೀ.. ಇನ್ನೊಂದು ಎಲೆಕ್ಷನ್‌ನಲ್ಲಿ 3 ಲಕ್ಷ ಸಂಗ್ರಹವಾಯ್ತು. ಎರಡು ಲಕ್ಷ ಖರ್ಚಾಯ್ತು. ಉಳಿದ ಒಂದು ಲಕ್ಷದಲ್ಲಿ ಗೆಳೆಯ ಪ. ಮಲ್ಲೇಶ್ ಲೋನ್ ಕೊಡ್ಸಿ ಮನೆ ಕಟ್ಟಿಸಿಕೊಟ್ಟಿದ್ದ.