ಮೈಸೂರು: ವಿಚ್ಛೇದನ ವಿಚಾರದಲ್ಲಿ ವಕೀಲರ ಕಚೇರಿಗೆ ಬಂದ ಪತ್ನಿಗೆ ಚಾಕುವಿನಿಂದ ಪತಿ ಇರಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡಹೊನ್ನುರು ಗ್ರಾಮದ ನಿವಾಸಿ ರಘು ಎಂಬಾತ ಕಳೆದ 5 ವರ್ಷಗಳ ಹಿಂದೆ ಮಮತ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಆದರೆ ಕೌಟುಂಬಿಕ ಕಲಹದಿಂದ ಕೆಲವು ತಿಂಗಳ ಹಿಂದೆ ಪತಿಗೆ ವಿಚ್ಛೇದನ ನೀಡಲು ವಕೀಲರಿಂದ ನೋಟಿಸ್ ಕೊಡಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಇಂದು ಈ ವಿಚಾರವಾಗಿ ವಕೀಲರ ಜೊತೆ ಮಾತನಾಡಲು ಪತಿ-ಪತ್ನಿ ಇಬ್ಬರೂ ವಕೀಲರ ಕಚೇರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ವಕೀಲರು ನ್ಯಾಯಾಲಯಕ್ಕೆ ತೆರಳಿದ್ದಾರೆ. ಆಗ ರಘು ವಕೀಲರ ಕಚೇರಿಯಲ್ಲೇ ಚಾಕುವಿನಿಂದ ಪತ್ನಿಗೆ ಇರಿದಿದ್ದು, ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಪತ್ನಿ ಮಮತಾಳನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಪಿರಿಯಾಪಟ್ಟಣ ಪೋಲಿಸರು ವಿಚಾರಣೆ ಕೈಗೊಂಡಿದ್ದಾರೆ.