ಮೈಸೂರು: ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಬೀಚನಹಳ್ಳಿ ಬಲದಂಡೆ ನಾಲೆಯಲ್ಲಿ ನಡೆದಿದೆ. ತಾಲೂಕಿನ ಹುಸ್ಕೂರು ಗ್ರಾಮದ ಶಂಕರ ಮತ್ತು ಪತ್ನಿ ಬೇಬಿ ಮೃತರು. ಈ ದಂಪತಿಗೆ 5 ವರ್ಷದ ಗಂಡು ಮಗುವಿದೆ.
ಹುಸ್ಕೂರು ಗ್ರಾಮದಿಂದ ಹರತಲೆ ಬಳಿಯಿರುವ ಬೀಚನಹಳ್ಳಿ ಬಲದಂಡೆ ನಾಲೆಗೆ ಬಟ್ಟೆ ಒಗೆಯಲೆಂದು ಬೇಬಿ ಬಂದಿದ್ದರು. ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಶಂಕರ ನಾಲೆಯ ಬಳಿ ಬಂದಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೇಬಿ ನೀರಿನಲ್ಲಿ ಹೋಗುತ್ತಿದ್ದ ವೇಳೆ ಪತ್ನಿಯನ್ನು ರಕ್ಷಿಸಲೆಂದು ಶಂಕರ ಸಹ ನಾಲೆಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ, ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರ ಶವಗಳು ತಾಲ್ಲೂಕಿನ ಕಳಲೆ ಗ್ರಾಮದ ಬಳಿ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೀರಿಗಿಳಿದ ರೈತ ಮುಳುಗಿ ಸಾವು: ಹಸುಗಳ ಮೈ ತೊಳೆಯಲೆಂದು ನೀರಿಗಿಳಿದ ರೈತ ಮುಳುಗಿ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ದೊಡ್ಡಬಳ್ಳಾಪುರ ತಾಲೂಕಿನ ಒಡೆಯರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ನಡೆದಿತ್ತು. ರಾಮಪುರ ಗ್ರಾಮದ 43 ವರ್ಷದ ಕುಮಾರ್ ಸಾವನ್ನಪ್ಪಿದವರು. ಕುಮಾರ್ ಅವರು ಆರು ದನಗಳ ಮೈತೊಳೆಯಲೆಂದು ಜಾಲಿಕಟ್ಟೆಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ಬಾರದೇ ಇರುವುದನ್ನು ಕಂಡು ಅನುಮಾನಗೊಂಡ ಕುಟುಂಬದವರು ಜಾಲಿಕಟ್ಟೆ ಬಳಿ ಹೋಗಿ ನೋಡಿದ್ದರು. ಆಗ ಅಲ್ಲಿ ಚಪ್ಪಲಿ ಮಾತ್ರ ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರು. ಆದರೆ ರಾತ್ರಿಯಾಗಿದ್ದ ಕಾರಣ ಅಂದು ಶೋಧ ಕಾರ್ಯ ನಡೆಸಿರಲಿಲ್ಲ. ಮರುದಿನ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್ಗಳ ಸಹಾಯದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ, ಮೃತದೇಹವನ್ನು ಹೊರತೆಗೆದಿದ್ದರು.
ಇದನ್ನೂ ಓದಿ:ಕೇರಳ: ಸ್ನಾನಕ್ಕೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು