ಮೈಸೂರು: ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಹುಲಿಯನ್ನು ಕೊಂದು ಅದರ ಉಗುರಿಗಾಗಿ ನಾಲ್ಕು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಲ್ಲಹಳ್ಳ ವಲಯದಲ್ಲಿ ನಡೆದಿದೆ.
ಶಾಕಿಂಗ್: ಹುಲಿ ಕೊಂದು ನಾಲ್ಕು ಕಾಲು ಕತ್ತರಿಸಿಕೊಂಡು ಹೋದ ಕಿರಾತಕರು!
ಬೇಟೆಗಾರರು ಹುಲಿಯನ್ನು ಕೊಂದು ಅದರ ನಾಲ್ಕು ಕಾಲುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿರುವ ಭಯಾನಕ ಘಟನೆ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕಲ್ಲಹಳ್ಳ ವಲಯದ ಕಾರ್ಮಾಡು ಗೇಟ್ ಹಾಗೂ ತಟ್ಟೆಕೆರೆ ಹಾಡಿಯ ಮಧ್ಯೆ ಅರಣ್ಯ ಪ್ರದೇಶದಲ್ಲಿ ಸುಮಾರು 6 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದೆ. ಆ ಹುಲಿಯನ್ನು ಗುಂಡು ಹಾರಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಬಂದೂಕಿನ ಗುಂಡು ಸ್ಥಳದಲ್ಲಿ ಸಿಕ್ಕಿದೆ. ಕಿರಾತಕರು ಹುಲಿಯನ್ನು ಕೊಂದು ಉಗುರಿಗಾಗಿ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ. ಅಲ್ಲದೆ ಕೋರೆ ಹಲ್ಲುಗಳನ್ನು ಕೀಳಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರ, ಟೈಗರ್ ಪ್ರಾಜೆಕ್ಟ್ನ ಜಗತ್ ರಾಂ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ನಾಗರಹೊಳೆ ನಿರ್ದೇಶಕ ಡಿ.ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.