ಮೈಸೂರು:ಸಂಸ್ಥಾನದ ಸಾಂಸ್ಕೃತಿಕ ಕಲೆ, ದಸರಾ ವೈಭವ, ಕುಸ್ತಿ, ಕ್ರೀಡೆ, ಸಂಪ್ರದಾಯ ಹೀಗೆ ನಾನಾ ವಿಷಯಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಮೈಸೂರು ಸಂಸ್ಥಾನದ ಇತಿಹಾಸವನ್ನು ಹುಡುಕುತ್ತ ಹೋದರೆ ರೋಚಕ ಕತೆಗಳನ್ನು ಸವಿಯಬಹುದು. ಈ ಸಂಸ್ಥಾನವನ್ನು 26 ಮಹಾರಾಜರು ಆಳ್ವಿಕೆ ನಡೆಸಿ ತಮ್ಮದೇ ಆದ ಕೊಡುಗೆ ಎಲ್ಲ ಕ್ಷೇತ್ರದಲ್ಲಿ ಬಿಟ್ಟು ಹೋಗಿದ್ದಾರೆ.
ನಾನಾ ಕೊಡುಗೆಗಳನ್ನು ನೀಡಿದ ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ ಎಂಬುವುದು ತುಂಬಾ ಕುತೂಹಲದಿಂದ ಕೂಡಿದೆ. 1399ರಲ್ಲಿ ಮೈಸೂರು ಸಂಸ್ಥಾನ ಬುನಾದಿಯಾಗಿದೆ ಎಂಬ ಮಾತಿದೆ. ಆದರೆ ಖಚಿತತೆ ಇನ್ನೂ ನಿಖರವಾಗಿಲ್ಲ. ಸಿಕ್ಕ ಮಾಹಿತಿಯನ್ನೇ ಓದುಗರಿಗೆ ನೀಡಲಾಗಿದೆ. ದ್ವಾರಕಾ ಪಟ್ಟಣದ ರಾಜದೇವನ ಮಕ್ಕಳಾದ ಯದುರಾಯ ಮತ್ತು ಕೃಷ್ಣರಾಯ ಎಂಬ ಯುವರಾಜರು. ಪುರಾಣ ಪ್ರಸಿದ್ಧ ಯಾದವಗಿರಿ (ಮೇಲುಕೋಟೆ)ಗೆ ಬಂದು ತಮ್ಮ ಮನೆ ದೇವರಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.