ಮೈಸೂರು :ಗೃಹಿಣಿಯೊಬ್ಬರ ನಾಪತ್ತೆ ಪ್ರಕರಣವೊಂದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧದಿಂದಾಗಿಯೇ ಗೃಹಿಣಿಯೊಬ್ಬರು ಪ್ರಾಣ ಕಳ್ಕೊಂಡಂತಾಗಿದೆ. ಮಗ ದಾಖಲಿಸಿದ ನಾಪತ್ತೆ ಪ್ರಕರಣ ಬೆನ್ನತ್ತಿದ ಪೊಲೀಸರು ಮಹಿಳೆ ಕೊಲೆ ಮಾಡಿದ ಹಾಗೂ ಕೊಲೆಗೆ ಸಹಕಾರ ನೀಡಿದ ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ.
ತಿ.ನರಸೀಪುರ ತಾಲೂಕಿ ಮಹೇಶ್(34), ಸೋಮ(34), ಹೆಮ್ಮಿಗೆ ಗ್ರಾಮದ ಚೌಡಯ್ಯ(58), ಅಕ್ಕೂರು ದೊಡ್ಡಿ ಗ್ರಾಮದ ಮಹದೇವ (50) ಬಂಧಿತ ಆರೋಪಿಗಳು. ಈಗಾಗಲೇ ಚೌಡಯ್ಯ ಹಾಗೂ ಮಹದೇವ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಏನಿದು ಘಟನೆ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮನಗಹಳ್ಳಿ ಗ್ರಾಮದ ನಿವಾಸಿ ರಾಜಮ್ಮ(42) ಹಾಗೂ ಅದೇ ತಾಲೂಕಿನ ಕೂಡಲೂರು ಗ್ರಾಮದ ನಿವಾಸಿ ಕೊಲೆಯಾದ ರಾಜಮ್ಮಳ ದೂರದ ಸಂಬಂಧಿ ಮಹೇಶ್ ನಡುವೆ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತಂತೆ. ಇಬ್ಬರು ಗಂಡು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಬರುತ್ತೀನಿ, ನಿನ್ನೊಂದಿಗೆ ಇರುತ್ತೀನಿ ಎಂದು ರಾಜಮ್ಮ ಮಹೇಶನಿಗೆ ಪೀಡಿಸತೊಡಗಿದ್ದಳಂತೆ. ಇದರಿಂದ ರೊಚ್ಚಿಗೆದ್ದ ಮಹೇಶ್, ಸೋಮನ ಜೊತೆಗೂಡಿ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಅಕ್ಕೂರುದೊಡ್ಡಿ ಗ್ರಾಮದ ತೋಟದ ಮನೆಗೆ ರಾಜಮ್ಮಳನ್ನು ಕರೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಸಿ ಬಿ ರಿಷ್ಯಂತ್ ಅವರಿಂದ ಕೊಲೆ ಪ್ರಕರಣದ ಕುರಿತ ಮಾಹಿತಿ.. ನಂತರ ಆಕೆಯನ್ನು ಕೊಲೆ ಮಾಡಿ ಮೋರಿಯ ಬಳಿ ಹೂತು ಹಾಕಿದ್ದಾರೆ. ತಾಯಿ ಬಾರದ ಕಾರಣ ಆತಂಕಗೊಂಡ ಮಗ ಶ್ರೀನಿವಾಸ್ 2020ರ ಜನವರಿ 28ರಂದು ಹನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಿ.ನರಸೀಪುರ ತಾಲೂಕಿನ ವ್ಯಾಪ್ತಿಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹನೂರು ಠಾಣೆ ಪೊಲೀಸರು ಪ್ರಕರಣವನ್ನು ತಲಕಾಡು ಠಾಣೆಗೆ ವರ್ಗಾವಣೆ ಮಾಡಿದಾಗ ಮಹೇಶ್ನನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ಮಾಡಿದಾಗ ರಾಜಮ್ಮಳ ಶವವನ್ನು ಕೆಲಸ ಮಾಡುತ್ತಿದ್ದ ಅದೇ ತೋಟದಲ್ಲಿ ಹೂತಿಟ್ಟು ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ್ದರು.
ಜನವರಿ ತಿಂಗಳಿನಲ್ಲಿ ಕೊಲೆ ಮಾಡಿ ಹೂತಿಟ್ಟಿದ್ದ ಶವವನ್ನು ಮೈಸೂರು ಜಿಲ್ಲಾ ಉಪ ವಿಭಾಗಾಧಿಕಾರಿ ವೆಂಕಟರಾಜ್ ನೇತೃತ್ವದಲ್ಲಿ ಶವ ಹೊರ ತೆಗೆದು ಪರೀಕ್ಷೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ತಿ.ನರಸೀಪುರ ವೃತ್ತ ನಿರೀಕ್ಷಕ ಎಂ ಆರ್ ಲವ ಮತ್ತು ತಲಕಾಡು ಪಿಎಸ್ಐ ಬಸವರಾಜು ಯಶ್ವಸಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿ ಬಿ ರಿಷ್ಯಂತ್ ಅವರು ಮಾಹಿತಿ ನೀಡಿದರು.