ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಶ್ವೇತಾ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಹಿಳೆ.
ಎರಡು ವರ್ಷದ ಹಿಂದೆ ಕೊಲ್ಲೂರು ಗ್ರಾಮದ ಶ್ವೇತಾರನ್ನು ಕಿತ್ತೂರು ಗ್ರಾಮದ ಬಸವರಾಜ್ ಅಲಿಯಾಸ್ ಪ್ರದೀಪ್ರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 100 ಗ್ರಾಂ ಚಿನ್ನ, 1 ಲಕ್ಷ ರೂ. ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಒಂದೆರಡು ತಿಂಗಳು ಶ್ವೇತಾ ತನ್ನ ಪತಿಯ ಜೊತೆ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದಾರೆ. ನಂತರ ಪತಿ ಬಸವರಾಜ್, ಅತ್ತೆ ಸರೋಜಮ್ಮ ಹಾಗೂ ನಾದಿನಿ ಲತಾ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆನ್ನುವ ಆರೋಪವಿದೆ.
ಈ ಹಿಂದೆ ಮೂರು ತಿಂಗಳ ಗರ್ಭಿಣಿಯಾಗಿದ್ದ ಶ್ವೇತಾ ವರದಕ್ಷಿಣೆ ಕಿರುಕುಳ ತಾಳಲಾರದೇ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದರು. ಈ ವೇಳೆ ಹಿರಿಯರು ರಾಜಿ ಸಂಧಾನ ಮಾಡಿದ್ದಾರೆ. ಆದರೆ ಮತ್ತೆ ಪತಿ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಮನನೊಂದ ಶ್ವೇತಾ ಮೂರು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕೆತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತ ಮೃತರ ಪತಿ ಮನೆಯವರು ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ:ಕವಿವಿಗೆ ಭೇಟಿ ನೀಡಿದ ಹೆಚ್ಡಿಕೆ.. ಮುತ್ತಿಗೆಗೆ ಯತ್ನಿಸಿದ ಪಿಎಸ್ಐ ಅಭ್ಯರ್ಥಿ ಮೇಲೆ ಗನ್ಮ್ಯಾನ್ನಿಂದ ಹಲ್ಲೆ!
ಶ್ವೇತಾ ಅವರ ಸಾವಿಗೆ ಕಾರಣರಾದ ಪತಿ ಬಸವರಾಜ್, ಅತ್ತೆ ಸರೋಜಮ್ಮ, ನಾದಿನಿ ಲತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ವೇತಾ ಪೋಷಕರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.