ಮೈಸೂರು: ಸಾಮೂಹಿಕ ಅತ್ಯಾಚಾರದಲ್ಲಿ ಬಂಧಿತರಾದ ಐವರು ಆರೋಪಿಗಳನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದು, ಅವರಿಂದ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿವೆ.
ತಮಿಳುನಾಡು ಮೂಲದ ತಿರುಪ್ಪೂರು ಭಾಗದ ಐವರು ಆರೋಪಿಗಳನ್ನು ಬಂಧಿಸಿರುವ ಮೈಸೂರು ಪೊಲೀಸರು, ಅವರನ್ನು ಕರೆತಂದು ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದು, ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆ ಪ್ರಕರಣದಲ್ಲಿ ಏಳು ಜನ ಭಾಗಿಯಾಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಉಳಿದ ಇಬ್ಬರ ಪತ್ತೆಗಾಗಿ ಪೊಲೀಸ್ ತಂಡ ಆರೋಪಿಗಳ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರ ತನಿಖೆ ಈ ಮಧ್ಯೆ ಬಂಧಿತ ಐದು ಜನ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿ, ಆರೋಪಿಗಳ ಕೂದಲು ಮತ್ತು ಚರ್ಮದ ಮಾದರಿಗಳನ್ನು ಪಡೆದು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ, ಇಲ್ಲಿದೆ ಕಂಪ್ಲೀಟ್ ಸ್ಟೋರಿ
ದರೋಡೆ ನಂತರ ಲೈಂಗಿಕ ಕಿರುಕುಳ:
ಬಂಧಿತ ಆರೋಪಿಗಳು ದರೋಡೆ ನಡೆಸಿದ ನಂತರ ಲೈಂಗಿಕವಾಗಿ ಯುವತಿ ಮತ್ತು ಮಹಿಳೆಯರನ್ನು ಹಿಂಸಿಸುತ್ತಿದ್ದರು ಎನ್ನಲಾಗಿದ್ದು, ಉಳಿದವರು ಹಣ ಮತ್ತು ಒಡವೆಗಳನ್ನು ದೋಚುತ್ತಿದ್ದರಂತೆ.
ಇನ್ನು ಲೈಂಗಿಕ ಕಿರುಕುಳದ ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹಲವರ ಬಳಿ ಗೂಗಲ್ ಪೇ ಮೂಲಕವೂ ಹಣ ಪಡೆಯುತ್ತಿದ್ದರು ಎನ್ನಲಾಗಿದ್ದು, ಮೈಸೂರಿನಲ್ಲಿ ಶ್ರೀಗಂಧದ ಮರ ಕಳವು ಹಾಗೂ ಇತರೆ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಕ್ರಿಯರಾಗಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.
ಕಾಂಡೋಮ್ ಜೇಬಿನಲ್ಲಿಟ್ಟುಕೊಳ್ತಿದ್ದ ಆರೋಪಿ
ಹಗಲಿನಲ್ಲಿ ನಿದ್ರಿಸುತ್ತಿದ್ದ ಆರೋಪಿಗಳು ರಾತ್ರಿಯಾಗುತ್ತಿದ್ದಂತೆ ಕಳ್ಳತನ, ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ದರೋಡೆಕೋರರ ಗ್ಯಾಂಗ್‌ನಲ್ಲಿದ್ದ ಒಬ್ಬಾತ ಕಾಂಡೋಮ್ ಅನ್ನು ಯಾವಾಗಲೂ ಜೊತೆಗೆ ಇಟ್ಟುಕೊಳ್ಳುತ್ತಿದ್ದನಂತೆ. ಈತ ದರೋಡೆ ನಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ನಡೆದ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಬಿಯರ್ ಬಾಟಲ್‌ಗಳು ಹಾಗೂ ಬಳಸಿ ಬಿಸಾಡಿದ ಕಾಂಡೋಮ್ ಸಿಕ್ಕಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಬಂಧಿಸಿರುವ ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದು, ಆತನ ವಯಸ್ಸನ್ನು ದೃಢೀಕರಿಸಲು ಪೊಲೀಸರು ಆತನಿಂದ ದಾಖಲಾತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.