ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದೆ. ಮೃತರೆಲ್ಲರೂ ಬಳ್ಳಾರಿ ಜಿಲ್ಲೆಯವರಾಗಿದ್ದಾರೆ. ಮೂರು ಕುಟುಂಬಗಳ 12 ಸದಸ್ಯರು ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸಿದ್ದ ವೇಳೆ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಸಂದೀಪ್ (24), ಅವರ ತಂದೆ ಕೊಟ್ರೇಶ್(45), ತಾಯಿ ಸುಜಾತಾ (40) ಒಂದು ಕುಟುಂಬದವರಾಗಿದ್ದು, ಇನ್ನೊಂದು ಕುಟುಂಬದ ಮಂಜುನಾಥ (35), ಪತ್ನಿ ಪೂರ್ಣಿಮಾ(30), ಮಕ್ಕಳಾದ ಕಾರ್ತಿಕ್ (08), ಪವನ್ (10) ಸಾವನ್ನಪ್ಪಿದ್ದಾರೆ. ಮತ್ತೊಂದು ಕುಟುಂಬದ ಗಾಯತ್ರಿ(35), ಮಗಳು ಶ್ರಾವ್ಯ(3) ಮೃತಪಟ್ಟಿದ್ದಾರೆ. ಹಾಗೆಯೇ ಕಾರು ಚಾಲಕ ಆದಿತ್ಯ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಜನಾರ್ದನ, ಪುನೀತ್ ಮತ್ತು ಸಂಗನಕಲ್ ಶಶಿಕುಮಾರ್ ಎಂಬುವರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಬಳ್ಳಾರಿ ತಾಲೂಕಿನ ಸಂಗನಕಲ್ ಗ್ರಾಮದವರಾಗಿದ್ದು ಮೇ 27 ರಂದು ಮೂರು ಕುಟುಂಬದವರು ಒಟ್ಟಿಗೆ ಬಳ್ಳಾರಿಯಿಂದ ರೈಲಿನ ಮೂಲಕ ಮೈಸೂರಿಗೆ ಆಗಮಿಸಿದ್ದರು. ಅಲ್ಲಿಂದ ವಾಹನವನ್ನು ಬಾಡಿಗೆಗೆ ಪಡೆದು ಮಲೆ ಮಾದೇಶ್ವರ ದರ್ಶನಕ್ಕೆ ಹೋಗಿ ಮೈಸೂರು ನಗರಕ್ಕೆ ವಾಪಸ್ ಆಗುತ್ತಿರುವ ವೇಳೆ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ಖಾಸಗಿ ಬಸ್ಗೆ ಡಿಕ್ಕಿಯಾಗಿ ಈ ದಾರುಣ ಘಟನೆ ಸಂಭವಿಸಿದೆ, ಘಟನೆ ನಡೆದ ಸ್ಥಳಕ್ಕೆ ಟಿ ನರಸಿಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಸಂಗನಕಲ್ ಗ್ರಾಮದಲ್ಲಿ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಪರಿಹಾರ ಘೋಷಿಸಿದ ಸಿಎಂ: ಈ ದುರಂತದಲ್ಲಿ ಮೃತ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೇ ರಾಜ್ಯಾದ್ಯಂತ ನಡೆದ ವಿವಿಧ ಅಪಘಾತ ಪ್ರಕರಣಗಳಲ್ಲಿ 17 ಜನರು ಪ್ರಾಣ ಕಳೆದುಕೊಂಡಿದ್ದರು.