ಮೈಸೂರು: ಉತ್ಪನ್ನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಪ್ಕಾಮ್ಸ್ ನೌಕರರೇ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ಮೈಸೂರು ಹಾಪ್ಕಾಮ್ಸ್ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಲ್ಲಿ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿ ಮಾಡದೇ, ಬೋಗಸ್ ಬಿಲ್ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸೃಷ್ಟಿಸಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹಾಪ್ಕಾಮ್ಸ್ನಲ್ಲಿ ಕೆಲಸ ಮಾಡುತ್ತಿರುವ ನೀಲೇಗೌಡ ಎಂಬುವವರು ಈಟಿವಿ ಭಾರತದ ಜೊತೆ ಮಾತನಾಡಿ, ನಿತ್ಯ ಮೈಸೂರು ಮೃಗಾಲಯದ ಆನೆಗಳಿಗೆ ಕಬ್ಬನ್ನು ಸರಬರಾಜು ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆ ಒಂದು ಟನ್ಗೆ 3 ಸಾವಿರ ದಿಂದ 5 ಸಾವಿರ ರೂ. ಇದ್ದು, ಇದಕ್ಕೆ 18 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಈ ಹಣವನ್ನು ಹಾಪ್ಕಾಮ್ಸ್ನಲ್ಲಿ ಕೆಲಸ ಮಾಡುವ ನೌಕರ ಸರಬರಾಜು ಮಾಡುತ್ತಾನೆ ಎಂದು ಆರೋಪಿಸಿದರು.