ಮೈಸೂರು: ನಾನು ಹೋಂ ಮಿನಿಸ್ಟರ್ ಅಷ್ಟೆ, ಸಿಎಂ ರೇಸ್ನಲ್ಲಿ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ತನ್ನದೇ ಆದ ಭವ್ಯ ಇತಿಹಾಸ ಹೊಂದಿದೆ. ಇಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಇದ್ದು, ವರ್ಷ ಪೂರ್ತಿ ತರಬೇತಿ ನಡೆಯುತ್ತಿರುತ್ತದೆ ಎಂದರು.
ಅನ್ಲಾಕ್ ಬಳಿಕ ಅಪರಾಧ ಹೆಚ್ಚಳ:ಲಾಕ್ಡೌನ್ನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಇದ್ದವು. ಅನ್ಲಾಕ್ ಆದ ಬಳಿಕ ಶೇ. 15 ರಿಂದ 20 ರಷ್ಟು ದರೋಡೆ , ಚೈನ್ ಕಳ್ಳತನ , ಸೈಬರ್ ಪ್ರಕರಣಗಳು ಹೆಚ್ಚಳವಾಗಿವೆ. ಇದರ ಜೊತೆಗೆ ಡ್ರಗ್ಸ್ ಪ್ರಕರಣಗಳು ಜಾಸ್ತಿಯಾಗಿದೆ.
ಇತ್ತೀಚೆಗೆ ಕಾಮನ್ ಪೋಸ್ಟ್ ಮೂಲಕವೂ ಡ್ರಗ್ಸ್ ಸರಬರಾಜು ಆಗುತ್ತಿದ್ದು, ಅಂಚೆ ಕಚೇರಿಯ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.
100 ಕೋಟಿ ದಂಡ ವಸೂಲಿ:ರಾಜ್ಯದಲ್ಲಿ ಅದರಲ್ಲೂ, ಬೆಂಗಳೂರು ಒಂದರಲ್ಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 100 ಕೋಟಿ ರೂ. ದಂಡ ವಸೂಲು ಮಾಡಲಾಗಿದೆ. ಈ ಹಣವನ್ನು ನೇರವಾಗಿ ರಸ್ತೆ ಅಭಿವೃದ್ಧಿಗೆ ಬಳಸಲು ಸಂಬಂಧಪಟ್ಟ ಇಲಾಖೆಯನ್ನು ಕೋರಿದ್ದೇವೆ. ಅವರಿಂದ ಉತ್ತರ ಬಂದಿಲ್ಲ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಣೆ :ರಮೇಶ್ ಜಾರಕಿಹೊಳಿ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹಾಗಾಗಿ, ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವರು ಹೇಳಿದರು. ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಯತ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಸಹ ಅವರು ನಿರಾಕರಿಸಿದರು.
ಕೋರ್ಟ್ ಆದೇಶದಂತೆ ಮೇಕೆದಾಟು ಯೋಜನೆ :ಮೇಕೆದಾಟು ಯೋಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ನಾನು ಹೋಂ ಮಿನಿಸ್ಟರ್ ಅಷ್ಟೇ :ಇನ್ನು, ಹೊಂ ಮಿನಿಸ್ಟರ್ ಚೀಫ್ ಮಿನಿಸ್ಟರ್ ಆಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಹೊಂ ಮಿನಿಸ್ಟರ್ ಅಷ್ಟೆ, ಸಿಎಂ ರೇಸ್ನಲ್ಲಿ ಇಲ್ಲ. ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಸಚಿವ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಡ್ರಗ್ಸ್ ಕೇಸ್ನಲ್ಲಿ ಕಳೆದ ವರ್ಷ 15 ರಿಂದ 20 ಮಂದಿ ವಿದೇಶಿಗರ ಬಂಧನವಾಗಿದೆ, ಈ ಪೈಕಿ ಆಫ್ರಿಕಾದವರು ಹೆಚ್ಚಿದ್ದಾರೆ. ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗದಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಪೊಲೀಸ್ ವರ್ಗಾವಣೆಯಲ್ಲಿ ಲಂಚ ಪಡೆಯುವ ವ್ಯವಸ್ಥೆ ಇಲ್ಲ. ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.