ಬೆಂಗಳೂರು: ಉದ್ಯೋಗಕ್ಕೆ ತೆರಳದ ಕಾರಣಕ್ಕೆ ತನ್ನ ಮಗನನ್ನು ಬೈಯುತ್ತಿದ್ದ ವ್ಯಕ್ತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದ ನಾಲ್ವರು ದೋಷಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ 4 ತಿಂಗಳಿಗೆ ಇಳಿಸಿತು. ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಹುಲ್ಕೂರು ಗ್ರಾಮದ ಗೋವಿಂದ ನಾಯ್ಕ, ಸಣ್ಣ ಸ್ವಾಮಿ, ಪರಿ ನಾಯ್ಕ ಮತ್ತು ಚನ್ನ ನಾಯ್ಕ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಪ್ರಕರಣವು ವಿಚಾರಣಾ ಹಂತದಲ್ಲಿರುವಾಗ ಮತ್ತು ವಿಚಾರಣೆಯ ನಂತರ ಅನುಭವಿಸಿರುವ ನಾಲ್ಕು ತಿಂಗಳ ಜೈಲು ವಾಸವನ್ನೇ ಪರಿಗಣಿಸಿದ ಹೈಕೋರ್ಟ್, ಎಲ್ಲ ನಾಲ್ವರು ಮೇಲ್ಮನವಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿತು.
ಅಪರಾಧಿಗಳು ನಡೆಸಿದ ಹಲ್ಲೆಯಿಂದಲೇ ಗೋವಿಂದ ನಾಯ್ಕ ಸಾವನ್ನಪ್ಪಿರುವುದು ಸಾಬೀತಾಗಿದೆ. ಹಾಗಾಗಿ, ಅವರನ್ನು ದೋಷಿಗಳಾಗಿ ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯದ ಆದೇಶವು ಸೂಕ್ತವಾಗಿದೆ. ಆದರೆ, ಅಪರಾಧಿಗಳಿಗೆ ಗೋವಿಂದ ನಾಯ್ಕ ಅವರನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧಕ್ಕೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೇ ಎರಡೂ ವಿಧಿಸಲು ಅವಕಾಶವಿದೆ.
ಪ್ರಕರಣದ ಸನ್ನಿವೇಶ-ಸಂದರ್ಭ, ಆರೋಪಿಗಳ ವಯಸ್ಸು ಪರಿಗಣಿಸಿದರೆ ಅವರನ್ನು ಜೈಲಿಗೆ ಕಳುಹಿಸುವ ಬದಲು ಈಗಾಗಲೇ ಅವರು ಅನುಭವಿಸಿರುವ ನಾಲ್ಕು ತಿಂಗಳ ಜೈಲು ವಾಸವನ್ನು ಪರಿಗಣಿಸಿದರೆ ಮತ್ತು ದಂಡ ಮೊತ್ತವನ್ನು ಹೆಚ್ಚಿಸಿದರೆ ನ್ಯಾಯೋಚಿತವಾಗುತ್ತದೆ ಎಂದು ನ್ಯಾಯಪೀಠ ತೀಮಾನಿಸಿತು. ಅರ್ಜಿದಾರರು ದಂಡ ತಲಾ 50 ಸಾವಿರ ರೂ. ದಂಡ ಪಾವತಿಸಬೇಕು ಎಂದು ಸೂಚನೆ ನೀಡಿದೆ.