ಮೈಸೂರು: ನಟ ಸಾಧು ಕೋಕಿಲ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ತಮ್ಮ ವಿರುದ್ಧ ಸಮನ್ಸ್ ರದ್ದು ಕೋರಿ ಸಾಧು ಕೋಕಿಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಬಿ ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಪ್ರಕರಣ ದಾಖಲಿಸಿದ್ದ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಸಾಧು ಕೋಕಿಲ ವಿರುದ್ಧ ಪ್ರಾಸಿಕ್ಯೂಷನ್ ಉಲ್ಲೇಖಸಿರುವ ಸಾಕ್ಷ್ಯಾಧಾರಗಳನ್ನು ಮುಂದಿನ ವಿಚಾರಣೆಯಲ್ಲಿ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಪೊಲೀಸರು ಕಾನೂನಿನಡಿ ತನಿಖೆ ನಡೆಸಿಲ್ಲ. ಸಾಧು ಕೋಕಿಲ ಅಲ್ಲಿಗೆ ಹೋಗಿಯೇ ಇಲ್ಲ ಎಂದ ಮೇಲೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದರೆ ಅವರ ತೇಜೋವಧೆ ಆಗಲಿದೆ, ಇದರಿಂದ ಮಾನಸಿಕ ಹಿಂಸೆ ಆಗುವುದು ಖಂಡಿತ. ಈ ಹಿನ್ನೆಲೆ ಚಾರ್ಜ್‌ಶೀಟ್ ರದ್ದುಗೊಳಸಬೇಕು ಎಂದು ಸಾಧು ಕೋಕಿಲ ಪರ ವಕೀಲ ಚಂದ್ರಮೌಳಿ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದಾರೆ.
ಪ್ರಕರಣವೇನು?: ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಮಸಾಜ್ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು, ನಟ ಸಾಧು ಕೋಕಿಲ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ 2017ರ ಅಕ್ಟೋಬರ್ 20ರಂದು ಸರಸ್ವತಿಪುರಂ ಠಾಣೆಯಲ್ಲಿ ದೂರು ನೀಡಿದ್ದಳು. ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಾಧು ಕೋಕಿಲ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರದ್ದುಕೋರಿ ಸಾಧು ಕೋಕಿಲ ಹೈಕೋರ್ಟ್ ಮೆಟ್ಟಿಲೇರಿದ್ದರು.