ಮೈಸೂರು : ಜಿಲ್ಲೆಯಲ್ಲಿನ ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಕೂಡ ದ್ವಿಚಕ್ರ ವಾಹನ ಬಳಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೇ ಇದಲ್ಲಿ ಕಾಲೇಜಿನ ಆವರಣದೊಳಗೆ ಪ್ರವೇಶ ನಿರ್ಬಂಧಿಸಿ ಆಡಳಿತ ವರ್ಗವು ಕಾನೂನು ಬದ್ದವಾಗಿ ಕ್ರಮ ಕೈಗೊಂಡು ಕಡ್ಡಾಯ ಹೆಲ್ಮೆಟ್ ನೀತಿಯನ್ನು ಅನುಸರಿವಂತೆ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಸೂಚಿಸಿದರು.
ನಗರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು, ಕಾಲೇಜುಗಳಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸದೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವುದು ಹೆಚ್ಚುತ್ತಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ವಾಹನ ಚಲಿಸುವ ಪ್ರತಿಯೊಬ್ಬ ಸವಾರರು ಕೂಡ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಧರಿಸುವಂತೆ ಹಾಗೂ ಪ್ರತಿಯೊಬ್ಬ ವಾಹನ ಸವಾರರು ಕೂಡ ಎರಡು ಹೆಲ್ಮೆಟ್‌ಗಳನ್ನು ತಮ್ಮ ಜೊತೆ ಇರಿಸಿಕೊಳ್ಳುವಂತೆ ಸೂಚನೆಯನ್ನು ನೀಡಬೇಕು ಎಂದರು.
ರಾತ್ರಿ ಸಂಚರಿಸುವ ವಾಹನಗಳು ನಿಯಮ ಪಾಲಿನೆ : ಇತ್ತೀಚೆಗೆ ಟಿ. ನರಸೀಪುರದ ಬಳಿ ನಡೆದ ಭೀಕರ ರಸ್ತೆ ಅಪಘಾತದ ವಿಚಾರವಾಗಿ ಮಾತನಾಡಿ ರಾಜೇಂದ್ರ ಅವರು, ಸಂಬಂಧಪಟ್ಟವರ ಮೇಲೆ ಕೇಸ್ ದಾಖಲಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು. ರಸ್ತೆ ಅಪಘಾತಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಬೇಕೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನಂದಿನಿ ಅವರಿಗೆ ತಿಳಿಸಿದರು. ಅಲ್ಲದೇ ಟೂರ್ ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು ಮತ್ತು ಲಾರಿ ಮಾಲೀಕರ ಸಂಘದ ಅಧ್ಯಕ್ಷರುಗಳನ್ನು ಕರೆಸಿ ಸಭೆ ನಡೆಸಿ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳು ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು. ರಾತ್ರಿ ವೇಳೆಯಲ್ಲಿ ಚಲಿಸುವ ವಾಹನಗಳಲ್ಲಿ ತಲಾ ಇಬ್ಬರು ಡ್ರೈವರ್‌ಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸಲು ಸೂಚನೆ ಕೊಟ್ಟರು.