ಮೈಸೂರು: ಇನ್ಫೋಸಿಸ್ ಸಂಸ್ಥಾಪಕರಾದ ಎನ್ ಆರ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಹಿನ್ನೆಲೆ ಹೆಬ್ಬಾಳ್ ಫೌಂಡೇಶನ್ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು.
ನಗರದ ವಿ.ವಿ.ಮೊಹಲ್ಲದಲ್ಲಿರುವ ಎನ್.ಆರ್.ನಾರಾಯಣಮೂರ್ತಿ ಮನೆ ಮುಂದೆ ಜಮಾಯಿಸಿದ ಹೆಬ್ಬಾಳ್ ಫೌಂಡೇಶನ್ ಸದಸ್ಯರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಭಾವಚಿತ್ರ ಹಿಡಿದು ಜಯಘೋಷ ಕೂಗಿದರು.
ಬಳಿಕ ಮಾತನಾಡಿದ ಡಿ.ಮಾದೇಗೌಡರು, 600 ವರ್ಷ ನಮ್ಮ ದೇಶವನ್ನ ಆಳಿದ ಬ್ರಿಟನ್ಗೆ ಭಾರತದ ಅಳಿಯ ಪ್ರಧಾನಿಯಾಗಿ ಆಯ್ಕೆಯಾಗಿರುವುದು ನಮಗೆಲ್ಲಾ ಸಂತಸ ನೀಡಿದೆ. ಅವರು ಮೈಸೂರಿನ ಅಳಿಯ ಕೂಡ ಹೌದು ಎಂದು ಹರ್ಷ ವ್ಯಕ್ತಪಡಿಸಿದರು.
ರಿಷಿ ಸುನಕ್ ಭಾವಚಿತ್ರ ಹಿಡಿದು ಮೈಸೂರಿನಲ್ಲಿ ಸಂಭ್ರಮಾಚರಣೆ ಇದನ್ನೂ ಓದಿ:ಆರ್ಥಿಕ ಸಶಕ್ತ ದೇಶ ಕಟ್ಟುವೆ, ಮಾತಲ್ಲಿ ಅಲ್ಲ ಮಾಡಿ ತೋರಿಸುವೆ: ರಿಷಿ ಸುನಕ್ ಭರವಸೆ
ನಾರಾಯಣಮೂರ್ತಿ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದು ಇನ್ಫೋಸಿಸ್ ಸಂಸ್ಥೆ ಕಟ್ಟಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅವರ ಪುತ್ರಿ ಅಕ್ಷತಾ ಮೈಸೂರಿನಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಅಕ್ಷತಾ ಪತಿ ಬ್ರಿಟನ್ ಪ್ರಧಾನಿಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎಂದರು.
ಸ್ಥಳೀಯ ನಿವಾಸಿಯಾದ ಅಶೋಕ್ ಮಾತನಾಡಿ, ಅಕ್ಷತಾ ಅವರನ್ನು ನೋಡಲು ರಿಷಿ ಸುನಕ್ ಮೈಸೂರಿಗೆ ಬಂದಾಗ, ಮೈಸೂರಿನ ಸಂಸ್ಕೃತಿ ತಿಳಿದು ಸಂತಸ ವ್ಯಕ್ತಪಡಿಸಿ, ಇಲ್ಲಿನ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.