ಮೈಸೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಅಬ್ಬರಿಸಿದ ವರುಣ ಬಿಸಿಲಿನಿಂದ ಕಾದು ಕಬ್ಬಿಣದಂತಾಗಿದ್ದ ಇಳೆಗೆ ತಂಪೆರೆದಿದ್ದಾನೆ.
ಮೈಸೂರಿನಲ್ಲಿ ಅಬ್ಬರಿಸಿದ ವರುಣ : ಧರೆಗುರುಳಿದ ಮರ, ಸಂಚಾರ ಅಸ್ತವ್ಯಸ್ಥ - ಮೈಸೂರಿನಲ್ಲಿ ವರುಣನ ಅಬ್ಬರ
ಮೈಸೂರು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ವರುಣ ಆರ್ಭಟಿಸಿದ್ದು, ಹಲವೆಡೆ ಮರಗಳು ಧರೆಗುರುಳಿದರೆ, ಕೆಲವೆಡೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಇನ್ನೂ ಕೆಲ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು.

ಜಿಲ್ಲೆಯ ಹುಣಸೂರು, ಎಚ್.ಡಿ.ಕೋಟಿ, ನಂಜನಗೂಡು, ಕೆ.ಆರ್.ನಗರ, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿದರೆ, ಕೆಲವೆಡೆ ಸಂಚಾರ ಅಸ್ತವ್ಯಸ್ಥವಾಗಿ ಜನರು ಪರದಾಡುವಂತಾಯಿತು. ಮೈಸೂರು ನಗರದ ಛತ್ರದ ಮರ ರಸ್ತೆಯಲ್ಲಿ 4 ಅಡಿಗಿಂತಲೂ ಹೆಚ್ಚು ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇನ್ನೂ ಕೆಲವೆಡೆ ಸಂಚಾರ ಮಾರ್ಗವನ್ನೇ ಬದಲಿಸಲಾಗಿತ್ತು. ನಗರದ ಶ್ರೀರಾಂಪುರ, ಕನಕಗಿರಿ, ಗಾಂಧಿನಗರ, ಕಲ್ಯಾಣಗಿರಿ, ಉದಯಗಿರಿ, ಕ್ಯಾತಮಾರನಹಳ್ಳಿಯ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾಮಾನುಜ ರಸ್ತೆಯ 12ನೇ ಕ್ರಾಸ್, ಅಕ್ಷಯ ಭಂಡಾರ ವೃತ್ತ, ಕಲಾಮಂದಿರ ರಸ್ತೆಯಲ್ಲಿ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಭಾರೀ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ರಸ್ತೆಗಳಲ್ಲಿ ಕತ್ತಲು ಕವಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ನಗರದ ಕಲಾಮಂದಿರ ಬಳಿ ತೆರಳುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದ ಪರಿಣಾಮ 5 ಮಂದಿಗೆ ಗಾಯವಾಗಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲದೆ ಕಾರನ್ನು ಸ್ಥಳಾಂತರ ಮಾಡಿದರು. ಮರಗಳು ಧರೆಗುರುಳಿದ ವಿಷಯ ತಿಳಿದ ನಗರ ಪಾಲಿಕೆ ಅಭಯ ತಂಡ, ಮರಗಳ ತೆರವು ಕಾರ್ಯ ಮಾಡಿದವು. ಹುಣಸೂರು ಹಾಗೂ ಎಚ್.ಡಿ.ಕೋಟೆಯಲ್ಲಿ ಆಲಿಕಲು ಸಹಿತ ಮಳೆಯಾಗಿದೆ. ಜಿಲ್ಲೆಯಲ್ಲಿ 20 ಮಿ.ಮೀ ಮಳೆಯಾಗಿದೆ.