ಮೈಸೂರು:ಈಗಲೂ ನಿತ್ಯ 2 ಲಕ್ಷ ವ್ಯಾಕ್ಸಿನ್ ನೀಡುತ್ತಿದ್ದೇವೆ. ನಮ್ಮಲ್ಲಿ 5 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದ್ದು ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರು ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ಈಗಲೂ ನಿತ್ಯ 2 ಲಕ್ಷ ವ್ಯಾಕ್ಸಿನ್ ನೀಡುತ್ತಿದ್ದೇವೆ. ನಮ್ಮಲ್ಲಿ ಈಗಲೂ 5 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದೆ.
ವ್ಯಾಕ್ಸಿನ್ ಡ್ರೈ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇಂದು ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತಷ್ಟು ವ್ಯಾಕ್ಸಿನ್ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತಿ ಹೆಚ್ಚು ವ್ಯಾಕ್ಸಿನ್ ನೀಡಿದ ರಾಜ್ಯ ಕರ್ನಾಟಕ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ರಾಜ್ಯದಲ್ಲಿ ಒಟ್ಟು 20 ಕೊರೊನಾ ಹಾಟ್ಸ್ಪಾಟ್ ಗುರುತಿಸಿದ್ದೇವೆ. ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ಮತ್ತು ಬನ್ನೂರು 2 ಹಾಟ್ಸ್ಪಾಟ್ ಆಗಿದೆ. ಇದನ್ನು ಕಂಟೇನ್ಮೆಂಟ್ ಝೋನ್ ಮಾಡಬೇಕಾಗಿದೆ ಎಂದರು.
ಮೈಸೂರಿನಲ್ಲಿ Delta plus ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇನ್ನೂ SSLC ಪರೀಕ್ಷೆ ನಡೆಸುವ ವಿಚಾರದಲ್ಲಿ ಮುಖ್ಯಮಂತ್ರಿಗಳೇ ಹೇಳಿದ ಮೇಲೆ ನನ್ನ ವೈಯಕ್ತಿಕ ಅಭಿಪ್ರಾಯ ಏನು ಇಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.