ಮೈಸೂರು : ಕಾಡಾನೆಗಳನ್ನು ಹಿಡಿಯಲು, ಸಾಕಾನೆಗಳನ್ನು ನಿಯಂತ್ರಿಸಲು ಹಾಗೂ ಅವುಗಳನ್ನು ಕಟ್ಟಿ ಹಾಕಲು ಹಗ್ಗಗಳು ಬೇಕು. ಈ ಹಗ್ಗಗಳನ್ನು ನಾಲ್ಕು ತಲೆಮಾರುಗಳಿಂದ ಹೆಣೆದುಕೊಂಡು ಬರುತ್ತಿರುವ ದೊಡ್ಡಪ್ಪಾಜಿ ಎಂಬುವರು ಹಾಗು ಕುಟುಂಬಸ್ಥರು ಅರಣ್ಯ ಇಲಾಖೆಗೆ ಹತ್ತಿರವಾಗಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಿ ವಾಸವಾಗಿರುವ ದೊಡ್ಡಪ್ಪಾಜಿ ಅವರು ಅರಣ್ಯ ಇಲಾಖೆಯಿಂದ ನಿವೃತ್ತರಾಗಿದ್ದು, ಆನೆಗಳ ಹಗ್ಗ ತಯಾರಿಸುವುದರಲ್ಲಿ ನಿಸ್ಸೀಮರು.
ಈ ಕುರಿತು ಮಾಹಿತಿ ನೀಡಿದ ಸೆಣಬಿನ ಹಗ್ಗ ಹೆಣೆಯುವುದರಲ್ಲಿ ಎಕ್ಸ್‌ಪರ್ಟ್ ಆಗಿರುವ ದೊಡ್ಡಪ್ಪಾಜಿ, ನಾವು ನಮ್ಮ ತಾತನ ಕಾಲದಿಂದಲೂ ಸೆಣಬಿನ ನಾರಿನ ಮೂಲಕ ಹಗ್ಗವನ್ನು ಹೆಣೆಯುತ್ತ ಬಂದಿದ್ದೇವೆ. ಕಾಡಾನೆಗಳನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಸೆಣಬಿನ ಹಗ್ಗಗಳನ್ನು ಬಳಸುವುದರಿಂದ ಆನೆಗಳ ಕುತ್ತಿಗೆ ಹಾಗೂ ಕಾಲಿಗೆ ಗಾಯವಾಗುವುದಿಲ್ಲ. ಅಲ್ಲದೇ, ಈ ಹಗ್ಗಗಳು ಸುದೀರ್ಘ ಕಾಲ ಬಾಳಿಕೆ ಬರುತ್ತದೆ. ಇದು ಬಹಳ ಗಟ್ಟಿಯಾಗಿರುವುದರಿಂದ ಆನೆಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ಮಾತನಾಡಿದ ಸ್ಥಳೀಯರಾದ ನಾಗಭೂಷಣ್ ರಾವ್ ಅವರು, ನಾನು ನೋಡಿದಂತೆ ಹಲವಾರು ವರ್ಷಗಳಿಂದ ಆನೆಗಳಿಗೆ ಬೇಕಾಗುವಂತ ಹಗ್ಗಗಳನ್ನು ದೊಡ್ಡಪ್ಪಾಜಿ ಹಾಗೂ ಅವರ ಕುಟುಂಬಸ್ಥರು ಹೆಣೆಯುತ್ತಾರೆ. ಇವರ ಕಾಯಕ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಇವರನ್ನು ಹುಡುಕಿಕೊಂಡು ಬಂದು ಹಗ್ಗ ತಯಾರಿಸಲು ಕೊಟ್ಟು ಹೋಗುತ್ತಾರೆ. ಸೆಣಬು ನಮ್ಮ ರಾಜ್ಯದಲ್ಲಿ ಸಿಗದೆ ಇರುವುದರಿಂದ ಹೈದರಾಬಾದ್ ಹಾಗು ಪಶ್ಚಿಮಬಂಗಾಳದಿಂದ ತಂದು ಇಲ್ಲಿ ಹಗ್ಗ ಮಾಡಲಾಗುತ್ತದೆ ಎಂದು ಹೇಳಿದರು.
ಕಾಡಾನೆಗಳ ಉಪಟಳ ನಿಯಂತ್ರಿಸಲು ಅವುಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು, ಸಾಕಾನೆಗಳ ಮಾವುತರು, ಕಾವಾಡಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಒಂದು ಕಾಡಾನೆಯನ್ನು ಹಿಡಿಯಲು ನಾಲ್ಕೈದು ಸಾಕಾನೆಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತಂಡವೇ ಬೀಡು ಬಿಡುತ್ತದೆ. ಇಂತಹ ಪುಂಡಾನೆಗಳ ಕಾಟಕ್ಕೆ ಬ್ರೇಕ್ ಹಾಕಿ ಅವುಗಳನ್ನು ಎಳೆದೊಯ್ಯುಲು ಸೆಣಬಿನ ಹಗ್ಗವನ್ನು ಬಳಸಲಾಗುತ್ತದೆ.