ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಕೈಕಟ್ಟಿ ನಿಂತು ಅವರು ಹೇಳಿದ್ದನ್ನು ಪಾಲನೆ ಮಾಡಬೇಕಾದ ಸ್ಥಿತಿ ಬಿಜೆಪಿಯ ರಾಜ್ಯ ನಾಯಕರಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮೈಸೂರಿನ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣಮಂಟದಲ್ಲಿ ನಡೆದ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಶರಣರೊಂದಿಗೆ ಕುಮಾರಣ್ಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ನೀಡುತ್ತಿಲ್ಲ. ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳಿಂದ ರಾಜ್ಯಕ್ಕೆ ಏನೂ ಅನುಕೂಲವಾಗಿಲ್ಲ ಎಂದು ಕಿಡಿಕಾರಿದರು.
ಉಭಯ ಸರ್ಕಾರದಿಂದ ರಾಜ್ಯ ದೊರೆತ ಕೊಡುಗೆ ಏನು? ರಾಜ್ಯದ ಅನೇಕ ವಿಷಯಗಳ ಕುರಿತು ಮನ್ನಣೆ ಕೊಟ್ಟಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡವಳಿಕೆ ಕುರಿತು ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು. 2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ರಚನೆ, ಅಧಿಕಾರ ಹಸ್ತಾಂತರ ಮಾಡದಿದ್ದರಿಂದ ಈ ಸರ್ಕಾರದ ಪತನದ ಕುರಿತು ಲಿಂಗಾಯತ ಸಮುದಾಯಕ್ಕೆ ಸುದೀರ್ಘ ವಿವರಣೆ, ಸ್ಪಷ್ಟನೆ ನೀಡಿದ ಹೆಚ್ಡಿಕೆ, ಈ ವಿಷಯದಲ್ಲಿ ನನ್ನ ತಪ್ಪು ಇಲ್ಲ. ಬಿಜೆಪಿಗೆ ಅಧಿಕಾರ ಹಸ್ತಾಂತರಕ್ಕೆ ನಾನು ಸಿದ್ಧ ಇದ್ದೆ. ಆದರೆ, ಅದು ಆಗಲಿಲ್ಲ. ಈ ವಿಷಯದಲ್ಲಿ ನನ್ನನ್ನು ಬಲಿ ಪಶು ಮಾಡಲಾಯಿತು. ಆದರೀಗ ಇದೆಲ್ಲ ಮುಗಿದ ಅಧ್ಯಾಯ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು? ರಾಜ್ಯದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆಯಲು ವೀರಶೈವ ಲಿಂಗಾಯತರು ಶಕ್ತಿ ತುಂಬಿದರು. ಈ ಸಮುದಾಯದ ನಾಯಕ ಬಿ ಎಸ್ ಯಡಿಯೂರಪ್ಪ ಎಂಬ ಕಾರಣಕ್ಕೆ ಹೀಗೆ ಮಾಡಿದರು. ಆದರೀಗ ಬಿಎಸ್ವೈ ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ. ಇವರು ಸಿಎಂ ಆಗಿದ್ದಾಗ ಗೌರವ ಕೊಡಲಿಲ್ಲ. ದೆಹಲಿಗೆ ಭೇಟಿ ನೀಡಿದ್ದಾಗ ಸಮಯ ಕೊಡದೇ 3 ದಿನ ಕಾಲ ಇವರನ್ನು ಕಾಯಿಸಿದ್ದರು. ಇದನ್ನು ಈ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.