ಕರ್ನಾಟಕ

karnataka

ETV Bharat / state

ನಾವು ಸುಮ್ಮನೆ ಇದ್ದರೂ 50 ಸೀಟ್ ಗೆಲ್ಲುತ್ತೇವೆ: ಹೆಚ್ ಡಿ ಕುಮಾರಸ್ವಾಮಿ - ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸುವ ವಿಶ್ವಾಸವನ್ನು ಇಂದು ಮೈಸೂರಿನ ಶಾಸಕ ಸಾರಾ.ಮಹೇಶ್ ಆಫೀಸ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ವ್ಯಕ್ತಪಡಿಸಿದ್ದಾರೆ.

Press conference
ಪತ್ರಿಕಾ ಗೋಷ್ಠಿ

By

Published : Mar 27, 2023, 2:48 PM IST

Updated : Mar 27, 2023, 3:07 PM IST

ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ

ಮೈಸೂರು:ಇಂದು ಮೈಸೂರಿನ ಶಾಸಕ ಸಾ ರಾ ಮಹೇಶ್ ಆಫೀಸ್​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ, ನಿನ್ನೆ ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದಕ್ಕೆ ನಾಡಿನ ಜನತೆಗೆ, ಕಾರ್ಯಕರ್ತರಿಗೆ ಹಾಗೂ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಹಾಗೂ ಪೋಲಿಸರಿಗೆ ಧನ್ಯವಾದ ಅರ್ಪಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಈ ಬಾರಿ 130,140 ಸೀಟ್ ಅನ್ನು ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದಿಂದ, ಪ್ರತಿನಿತ್ಯ ಒಂದೊಂದು ಸರ್ವೇ ಮಾಡಿಸುತ್ತಿದ್ದು, ಈ ಸರ್ವೇ ರಿಪೋರ್ಟ್ ಗಳನ್ನು ಕಾಂಗ್ರೆಸ್ ಕಚೇರಿಯಲ್ಲಿ ‌ಕಟ್ಟು ಹಾಕಿಸಿಕೊಂಡು ಇಟ್ಟುಕೊಳ್ಳಲಿ. ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಏನು ಎಂಬುದು ನನಗೆ ಗೊತ್ತು. ‌ಅವರ ಮುಂದಿನ ಚುನಾವಣೆಯಲ್ಲಿ 75 ಸೀಟ್ ಗಳನ್ನು ಸಹ ದಾಟುವುದಿಲ್ಲ ಎಂದು ಟೀಕಿಸಿದರು.

ಕಳೆದ ಬಾರಿ 5 ವರ್ಷ ಆಡಳಿತ ಮಾಡಿ, ಹಲವಾರು ಭಾಗ್ಯಗಳನ್ನು ಕೊಟ್ಟು, ಮುಸ್ಲಿಮರಿಗೆ ಜೆಡಿಎಸ್ ಗೆ ಮತಹಾಕಬೇಡಿ ಎಂದು ಹೇಳಿ 70 ಸೀಟ್ ಪಡೆದರು. ಕೊನೆಗೆ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿಯಂತ ಕೆಟ್ಟ ಸರ್ಕಾರವನ್ನು ತಂದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಫೇಲ್ ಆಗಿದೆ. ಕೇವಲ ಪ್ರತಿನಿತ್ಯ ಜಾಹೀರಾತನ್ನು ಕೊಡುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದೆ. ಈ ಬಾರಿ ಬಿಜೆಪಿ ಏನೇ ಮಾಡಿದರು ಗೆಲ್ಲುವುದು ಕಷ್ಟ ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಎರಡಲ್ಲ, ಮೂರು ಕಡೆ ಸ್ಪರ್ಧೆ ಮಾಡಲಿ- ಹೆಚ್​ಡಿಕೆ :ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ದೇವರಾಜ ಅರಸು ಬಳಿಕ 5 ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ಹಲವಾರು ಭಾಗ್ಯಗಳನ್ನು ನೀಡಿದವರು, ಒಂದು ವಿಧಾನ ಸಭಾ ಕ್ಷೇತ್ರವನ್ನು ಹುಡುಕಿಕೊಳ್ಳಲು ಒದ್ದಾಡುತ್ತಿದ್ದಾರೆ. ಈಗ ಎರಡು ಕಡೆ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ.‌ ಅವರು ಎರಡಲ್ಲ ಮೂರು ಕಡೆ ಸ್ಪರ್ಧೆ ಮಾಡಲಿ ಎಂದು ಟಕ್ಕರ್​ ನೀಡಿದರು. ರಾಜಕೀಯದಲ್ಲಿ ದೇವೇಗೌಡರದ್ದು ಧೃತರಾಷ್ಟ್ರ ಪ್ರೇಮ ಎನ್ನುತ್ತಾರೆ. ಆದರೆ ಇವರು ಮಗನ ಬಗ್ಗೆ ಯಾವ ರೀತಿ ಪ್ರೇಮ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ನಾವು ಸುಮ್ಮನೆ ಇದ್ದರೂ 50 ಸೀಟ್ ಗೆಲ್ಲುತ್ತೇವೆ. ಆದರೆ ಶ್ರಮ ಪಟ್ಟರೆ 125 ಸೀಟ್ ಗೆಲ್ಲಬಹುದು, ಅದಕ್ಕಾಗಿಯೇ ಪಂಚರತ್ನ ಸಮಾರೋಪ ಸಮಾರಂಭವನ್ನು, ತಾಯಿ ಚಾಮುಂಡೇಶ್ವರಿಯ ಅನುಗ್ರಹಕ್ಕಾಗಿ ಕ್ಷೇತ್ರದಲ್ಲೇ ನಡೆಸಲಾಯಿತು ಎಂದ ಹೆಚ್ ಡಿ ಕುಮಾರಸ್ವಾಮಿ, ಇನ್ನೆರೆಡು ದಿನಗಳಲ್ಲಿ ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ಬಿಜೆಪಿ ಮೀಸಲಾತಿ ವಿಚಾರದಲ್ಲಿ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದೆ- ಹೆಚ್​ಡಿಕೆ :ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನಾತ್ಮಕ ವಿಚಾರಗಳನ್ನು ಪರಿಗಣಿಸದೆ ಒಕ್ಕಲಿಗರಿಗೆ, ವೀರಶೈವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಕಾನೂನಾತ್ಮಕವಾಗಿ ಜಾರಿಗೆ ಬರುವುದು ಕಷ್ಟ. ಈ ವಿಚಾರದಲ್ಲಿ ಬಿಜೆಪಿ ಜನರಿಗೆ ಕಿವಿಯಲ್ಲಿ ಹೂ ಮುಡಿಸುವ ಕೆಲಸ ಮಾಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹೇಳಿಕೆಗಳು ಸರಿಯಲ್ಲ. ಸ್ವಾಮೀಜಿಯವರನ್ನು ಯಾರು ಬ್ಲಾಕ್ ಮೇಲ್ ಮಾಡಿಲ್ಲ ಎಂದರು. ಮುಸ್ಲಿಮರಿಗೆ ಮೀಸಲಾತಿಯನ್ನು ಕಡಿಮೆ ಮಾಡಿ ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದೆ. ಅಂದರೆ‌ ಹಿಂದು-ಮುಸ್ಲಿಮರ ನಡುವೆ ಬೆಂಕಿ ಹಚ್ಚಿ ಚುನಾವಣೆ ಗೆಲ್ಲಲು ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪಂಚರತ್ನ ರಥಯಾತ್ರೆ ಮುಂದುವರೆಸುತ್ತೇನೆ :ನಿನ್ನೆ ಪಂಚರತ್ನ ಯಾತ್ರೆಯ ಸಮಾರೋಪ ನಡೆದಿದ್ದರೂ, ನಿಗದಿಯಾದ ಕಾರ್ಯಕ್ರಮಗಳು ಮುಂದುವರಿಯಲಿವೆ. ಬೆಂಗಳೂರಿನ ಗೊವಿಂದರಾಜನಗರ, ಯಲಹಂಕ, ವಿಜಯನಗರ ವಿಧಾನಸಭಾ ಕ್ಷೇತ್ರಗಳು, ಏಪ್ರಿಲ್ 4,5 ಹಾಗೂ 2 ನೇ ತಾರೀಖು ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಗುಂಡ್ಲುಪೇಟೆಯಲ್ಲಿ, ಏಪ್ರಿಲ್ 7 ರಂದು ಪಿರಿಯಾಪಟ್ಟಣ, ಏಪ್ರಿಲ್ 10 ರಂದು ಚಿತ್ರದುರ್ಗದಲ್ಲಿ ಪಂಚರತ್ನ‌ ರಥಯಾತ್ರೆಯ ನಿಗದಿತ ಕಾರ್ಯಕ್ರಮಗಳು ನಡೆಯಲಿವೆ. ರಾಮನಗರದಲ್ಲಿ ಮುಖ್ಯಮಂತ್ರಿಗಳು 600 ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಕೇವಲ ಪ್ರಚಾರಕ್ಕಾಗಿ, ಅದು ಜಾರಿಗೆ ಬರುವುದಿಲ್ಲ ಎಂದು ಹೆಚ್​ ಡಿ ಕೆ ಟೀಕಿಸಿದರು.

ಇದನ್ನೂ ಓದಿ: ಬಾದಾಮಿಯಲ್ಲಿ ಸೋಲುವ ಮಾಹಿತಿ ಸಿದ್ದರಾಮಯ್ಯಗೆ ಸಿಕ್ಕಿದೆ, ಹೀಗಾಗಿ ಕ್ಷೇತ್ರ ಬದಲಿಸಿದ್ದಾರೆ: ಸಚಿವ ಮುರುಗೇಶ ನಿರಾಣಿ

Last Updated : Mar 27, 2023, 3:07 PM IST

ABOUT THE AUTHOR

...view details