ಮೈಸೂರು: ಇಂತಹ ಅಹಿತಕರ ಘಟನೆಗಳಿಂದ ಬಿಜೆಪಿಗೆ ರಾಜಕೀಯ ಲಾಭ ಹೆಚ್ಚು. ಮತ ಕ್ರೋಢೀಕರಣಕ್ಕಾಗಿ ಪ್ರವೀಣ್ ರೀತಿ ಮತ್ತಷ್ಟು ಕೊಲೆಗಳಾಗಲಿ ಎಂದು ಬಿಜೆಪಿ ಬಯಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಈ ರೀತಿಯ ಹತ್ಯೆಗಳು ಬಿಜೆಪಿಗೆ ರಾಜಕೀಯ ಫಸಲು. ಹಿಂದುತ್ವ ಕಾರ್ಡ್ ಆಧಾರದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಹೆಚ್ಚು ಹೆಚ್ಚು ಯುವಕರ ಕೊಲೆ ಪ್ರಕರಣಗಳು ನಡೆದಷ್ಟೂ ಅವರಿಗೆ ಅನುಕೂಲ. ಬಿಜೆಪಿ ನಾಯಕರು ಕೃತಕ ಸಂತಾಪ ಸೂಚಿಸುತ್ತಾರೆ ಎಂದು ಕಿಡಿಕಾರಿದರು.
ಯುವಕನ ತಾಯಿ ರೋಧಿಸುವುದನ್ನು ನೋಡಿದರೆ ನನಗೆ ನೋವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ರೋಧನೆ ತಪ್ಪಿಸಲು ಸಾಧ್ಯ ಇರಲಿಲ್ಲವೇ ? ಒಬ್ಬ ಸರ್ಕಲ್ ಇನ್ಸ್ಪೆಕ್ಟರ್ಗೆ 75 ಲಕ್ಷದಿಂದ 1 ಕೋಟಿ ರೂ ಪಡೆದು ಅವರಿಗೆ ಹುದ್ದೆ ನೀಡಿದರೆ ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ನೀವು ಸರಿಯಾಗಿ ಆಡಳಿತ ಮಾಡಿದ್ದರೆ ಸಾವುಗಳು ಏಕೆ ಸಂಭವಿಸುತ್ತಿದ್ದವು? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.