ಮೈಸೂರು:ಇಂದು ಬೆಳಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಜೊತೆಯಲ್ಲಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ ದೇವೇಗೌಡ ಅವರಿಗೆ ನೀಡಲಾಗಿದೆ. ಅವರ ನಾಯಕತ್ವದಲ್ಲಿ ಎಲ್ಲವೂ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಈ ಬಗ್ಗೆ ಯಾರಾದರೂ ಅಪಸ್ವರ ಎತ್ತಿದರೆ ನಾನು ಸಹಿಸುವುದಿಲ್ಲ. ಅವರು ಹೊರಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದರು.
ಚಾಮುಂಡಿ ಬೆಟ್ಟಕ್ಕೆ ಜೆಡಿಎಸ್ ವರಿಷ್ಠ ಹೆಚ್ಡಿಡಿ ಭೇಟಿ ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿಯಿಂದ ನನ್ನ ಮನವೊಲಿಕೆ ನಡೆಯುತ್ತಿದೆ ಅನ್ನೋದು ಸುಳ್ಳು; ಶಾಸಕ ಜಿಟಿಡಿ
ಶಾಸಕ ಜಿ ಟಿ ದೇವೇಗೌಡ ಮಾತನಾಡಿ, ಜನವರಿ ತಿಂಗಳಿನಲ್ಲಿ ಹೆಚ್.ಡಿ ದೇವೇಗೌಡರು ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ನಡೆಸಲಿದ್ದಾರೆ. ಇಂದು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕುಳಿತು ನನಗೆ ಇನ್ನೊಂದು ತಿಂಗಳಿನಲ್ಲಿ ನಡೆದಾಡುವ ಶಕ್ತಿ ಕೊಡು ಎಂದು ಬೇಡಿಕೊಂಡಿದ್ದು, ಅವರನ್ನು ನೋಡಿ ನಮಗೆ ಆಶ್ಚರ್ಯ ಆಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ಮಗ ಹರೀಶ್ ಗೌಡ ಹುಣಸೂರು, ಕೆ.ಆರ್ ನಗರದಿಂದ ಸಾರಾ ಮಹೇಶ್, ಪಿರಿಯಾ ಪಟ್ಟಣದಿಂದ ಕೆ. ಮಾದೇವ್, ಟಿ.ನರಸೀಪುರದಿಂದ ಅಶ್ವಿನ್, ಹೆಚ್.ಡಿ ಕೋಟೆಯಿಂದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯ ಪ್ರಕಾಶ್ ಅವರಿಗೆ ಬಹುತೇಕ ಟಿಕೆಟ್ ಅಂತಿಮವಾಗಿದೆ ಎಂದರು.
ಮೂರು ವರ್ಷಗಳ ನಂತರ ನಿನ್ನೆಯಿಂದ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಮನಸ್ಸಿನಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಸಮಾಧಾನವಾಗಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಜಿ.ಟಿ ದೇವೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಸಂಧಾನ ಸಭೆ: ನಿನ್ನೆ ಶಾಸಕ ಜಿ.ಟಿ ದೇವೇಗೌಡ ಅವರ ನಡುವೆ ಇದ್ದ ವೈಮನಸ್ಸನ್ನು ಬಗೆಹರಿಸಿದ ನಂತರ ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಶಾಸಕ ಸಾರಾ ಮಹೇಶ್ ಹಾಗೂ ಜಿಟಿಡಿ ಅವರನ್ನು ಸರ್ಕಾರಿ ಅತಿಥಿ ಗೃಹಕ್ಕೆ ಕರೆಸಿ ಸಂಧಾನ ಸಭೆ ನಡೆಸಿದರು. ಇನ್ನು ಮುಂದೆ ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಬರದಂತೆ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಮುಂಬರುವ ವಿಧಾನ ಸಭೆ ಹಾಗೂ ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:'ನಾನು ಜೆಡಿಎಸ್ ಬಿಟ್ಟು ಹೋಗಲ್ಲ..': ದೇವೇಗೌಡರೆದುರು ಕಣ್ಣೀರು ಹಾಕಿದ ಜಿಟಿಡಿ