ಮೈಸೂರು:ಕಬಡ್ಡಿ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ ಮೂರನೇ ಕ್ವಾರ್ಟರ್ನಲ್ಲಿ ತಿರುಗೇಟು ನೀಡಿದ ಹರಿಯಾಣ ಹೀರೋಸ್ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೋ-ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ನ ತನ್ನ 8ನೇ ಪಂದ್ಯದಲ್ಲಿ ತೆಲುಗು ಬುಲ್ಸ್ ವಿರುದ್ಧ ಜಯ ದಾಖಲಿಸಿದೆ.
ಮೈಸೂರು ಜಿಲ್ಲೆಯ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಹರಿಯಾಣ ತಂಡ 43-35 ಅಂಕಗಳಿಂದ ತೆಲುಗು ಬುಲ್ಸ್‍ಗೆ ಸೋಲುಣಿಸಿ ಪೂರ್ಣ ಎರಡು ಅಂಕ ತನ್ನದಾಗಿಸಿಕೊಂಡಿತು. ಇನ್ನು ಇದರೊಂದಿಗೆ ಲೀಗ್‍ನಲ್ಲಿ ಎರಡನೇ ಜಯ ದಾಖಲಿಸಿದ ಹೀರೋಸ್, ಒಟ್ಟು 5 ಅಂಕ ಸಂಪಾದಿಸಿದೆ. ಅತ್ತ 8ನೇ ಸೋಲಿಗೆ ಒಳಗಾದ ಬುಲ್ಸ್ ಮುಂದಿನ ಹಂತವನ್ನು ಬಹುತೇಕ ದುರ್ಗಮ ಮಾಡಿಕೊಂಡಿದೆ.
ಪಂದ್ಯದ ಮೊದಲೆರಡು ಕ್ವಾರ್ಟರ್ಗಳಲ್ಲಿ ಕ್ರಮವಾಗಿ 6-10, 8-9ರಲ್ಲಿ ಹಿನ್ನಡೆ ಅನುಭವಿಸಿದ ಹರಿಯಾಣ, ಮೂರನೇ ಹಾಗೂ ನಾಲ್ಕನೇ ಕ್ವಾರ್ಟರ್ನಲ್ಲಿ ಕ್ರಮವಾಗಿ 16-9 ಮತ್ತು 12-7ರಲ್ಲಿ ಮೇಲುಗೈ ಸಾಧಿಸಿ ಒಟ್ಟು 8 ಅಂಕಗಳ ವಿಜಯೋತ್ಸವ ಆಚರಿಸಿತು.
ತೆಲುಗು ಬುಲ್ಸ್ ವಿರುದ್ಧ ಹರಿಯಾಣ ಹೀರೋಸ್‍ಗೆ ಜಯ ಗೆಲುವಿನ ಹಳಿಗೆ ಬೆಂಗಳೂರು:
ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ರೈನೋಸ್ ತಂಡ, ಭಾನುವಾರ ನಡೆದ ಪಂದ್ಯದಲ್ಲಿ ತೆಲುಗು ಬುಲ್ಸ್ ವಿರುದ್ಧ ಭರ್ಜರಿ ಜಯ ಗಳಿಸಿತು. ಇದರೊಂದಿಗೆ 7 ಅಂಕ ಸಂಪಾದಿಸಿದ ರೈನೋಸ್ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿಯಿತು. ಪಂದ್ಯದ ನಾಲ್ಕೂ ಅವಧಿಗಳಲ್ಲೂ ಪ್ರಭುತ್ವ ಸಾಧಿಸಿದ ಬೆಂಗಳೂರು ತಂಡದ ಆಟಗಾರರು ಯಾವುದೇ ಹಂತದಲ್ಲೂ ಮುನ್ನಡೆ ಬಿಟ್ಟು ಕೊಡಲಿಲ್ಲ.
14-6ರಲ್ಲಿ ಆರಂಭಿಕ ಮುನ್ನಡೆ ಪಡೆದುಕೊಂಡ ರೈನೋಸ್ ಎರಡನೇ ಕ್ವಾರ್ಟರ್ನಲ್ಲೂ 13-5ರಲ್ಲಿ ಮುನ್ನಡೆ ಸಾಧಿಸಿತು. ಈ ವೇಳೆ ತಿರುಗೇಟು ನೀಡಲು ಬುಲ್ಸ್ ಆಟಗಾರರು ಯತ್ನಿಸಿದರೂ ಆತಿಥೇಯ ರೈನೋಸ್ ತಂಡದ ಟ್ಯಾಕಲ್ ಮತ್ತು ರೈಡಿಂಗ್ ಮುಂದೆ ಸಂಪೂರ್ಣ ಮಂಡಿಯೂರಿದರು. ಮೂರು ಮತ್ತು ನಾಲ್ಕನೇ ಕ್ವಾರ್ಟರ್ನಲ್ಲೂ ಪಾರಮ್ಯ ಮುಂದುವರಿಸಿದ ರೈನೋಸ್ ಕ್ರಮವಾಗಿ 11-5 ಮತ್ತು 13-4ರಿಂದ ಅಂತರ ಹೆಚ್ಚಿಸಿಕೊಂಡು ದೊಡ್ಡ ಗೆಲುವು ದಾಖಲಿಸಿದರು. ಬೆಂಗಳೂರು ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ ವಿಶಾಲ್ ರೈಡಿಂಗ್ ವಿಭಾಗದಲ್ಲಿ 21 ಅಂಕ ಕಲೆಹಾಕಿ ಎಲ್ಲರ ಮನ ಗೆದ್ದರು.
ಪುಣೆ ಆರ್ಭಟಕ್ಕೆ ಚೆನ್ನೈ ಬ್ರೇಕ್:
ಇನ್ನೊಂದು ಪಂದ್ಯದಲ್ಲಿ ಪ್ರಬಲ ಪುಣೆ ಪ್ರೈಡ್‍ಗೆ ಆಘಾತ ನೀಡಿದ ಚೆನ್ನೈ ಚಾಲೆಂಜರ್ಸ್ ತಂಡ 4 ಅಂಕಗಳ ಅಂತರದಲ್ಲಿ ಗೆದ್ದು ಕುಣಿದಾಡಿತು. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ನಲ್ಲಿ ಚೆನ್ನೈ ತಂಡ 6-15ರಲ್ಲಿ ಹಿನ್ನಡೆ ಅನುಭವಿಸಿದರೂ ಮೊದಲ ಮೂರು ಕ್ವಾರ್ಟರ್ಗಳಲ್ಲಿ ಕ್ರಮವಾಗಿ 14-5, 8-8 ಮತ್ತು 11-7ರಲ್ಲಿ ಮೇಲುಗೈ ಸಾಧಿಸಿ ಒಟ್ಟಾರೆ 39-35ರಲ್ಲಿ ಪಂದ್ಯ ವಶಪಡಿಸಿಕೊಂಡಿತು.