ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮೈಸೂರು:''ಈ ಬಾರಿ ನಾಡಹಬ್ಬ ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಖ್ಯಾತಿಯ ಹಂಸಲೇಖ ದಸರಾ ಉದ್ಘಾಟನೆ ಮಾಡಲಿದ್ದಾರೆ'' ಎಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಚಾಮುಂಡಿ ಬೆಟ್ಟದ ಮುಂಭಾಗದಲ್ಲೇ ಸಿಎಂ ಹಾಗೂ ಡಿಸಿಎಂ ಜಂಟಿಯಾಗಿ ಘೋಷಣೆ ಮಾಡಿದರು.
ನಾಳೆ ಮೈಸೂರಿನಲ್ಲಿ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವರ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ಮೇ 9 ರಂದು ಚಾಮುಂಡಿ ಬೆಟ್ಟಕ್ಕೆ ಬಂದು ಹರಕೆ ಹೊತ್ತಿದ್ದ ಸಿಎಂ ಹಾಗೂ ಡಿಸಿಎಂ ಇಂದು ಹರಕೆ ತೀರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಹಂಸಲೇಖರಿಂದ ಈ ಬಾರಿಯ ದಸರಾ ಉದ್ಘಾಟನೆ:ನಾಡಹಬ್ಬ ದಸರಾ-2023 ಅನ್ನು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ತಿಳಿಸಿದರು. ಬಳಿಕ ಮಾತನಾಡಿದ ಸಿಎಂ, ''ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಚುನಾವಣಾ ಸಂದರ್ಭದಲ್ಲಿ ಹೇಳಿದ್ದೆವು. ಅದೇ ರೀತಿ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಇಲ್ಲ. ಪಿಎಸ್ ಐ ಹಗರಣ, ಶೇ 40ರಷ್ಟು ಕಮಿಷನ್ ಹಗರಣ ಹಾಗೂ ಕೊವಿಡ್ ಸಂದರ್ಭದಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ತಿಂದುಕೊಂಡು ಹೋಗಲಿ ಎಂದು ಬಿಟ್ಟುಬಿಡಬೇಕಾ. ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ'' ಎಂದು ಹೇಳಿದರು.
ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ:''ಸರ್ಕಾರ ನೂರು ದಿನ ಪೂರೈಸಿದ್ದು, ಇದು ನಮಗೆ ಸವಾಲು ಎನಿಸಲಿಲ್ಲ. ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು.
ಈ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣ ಅನಿಸಲಿಲ್ಲ. ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಜಾರಿ ಮಾಡುತ್ತೇವೆ. ಖುದ್ದು ಪಿಎಂ ಗ್ಯಾರಂಟಿ ಬಗ್ಗೆ ಆರೋಪ ಮಾಡಿದ್ದರು. ಆದರೆ, ಗ್ಯಾರಂಟಿ ಜಾರಿಯಿಂದ ರಾಜ್ಯ ದಿವಾಳಿಯಾಗಿಲ್ಲ. ಎಲ್ಲವನ್ನೂ ಜಾರಿ ಮಾಡುತ್ತಿದ್ದೇವೆ. ಗೃಹ ಲಕ್ಷ್ಮಿಗೆ ವರ್ಷಕ್ಕೆ 32 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆಗೆ ಇಷ್ಟು ಪ್ರಮಾಣದ ಹಣ ಖರ್ಚಾಗುತ್ತಿರುವುದು ಇದೇ ಮೊದಲು'' ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾವಿಬ್ಬರು ಮತ್ತಷ್ಟು ಹತ್ತಿರವಾಗುತ್ತಿದ್ದೇವೆ:''ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ವಿರೋಧ ಪಕ್ಷದವರು ಎಷ್ಟೇ ಆರೋಪ ಮಾಡಿ, ದೂರ ಮಾಡಲು ಯತ್ನಿಸಿದರು. ನಾವು ಮತ್ತಷ್ಟು ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದ್ದೇವೆ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ಸಂದರ್ಭದಲ್ಲಿ ಸಿಎಂ ಮಾತಿಗೆ ದನಿಗೂಡಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ''ವಿರೋಧ ಪಕ್ಷಗಳು ನಮ್ಮ ಸಂಬಂಧ ಹಾಗೂ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಸದಾ ಒಟ್ಟಿಗೆ ಇರುವುದನ್ನು ನೀವು ಮಾಧ್ಯಮದವರು ನೋಡುತ್ತಲೇ ಇರುತ್ತೀರಿ ಎಂದು ಪ್ರತಿಕ್ರಿಯಿಸಿದ ಡಿಸಿಎಂ, ''ಚುನಾವಣೆಗೆ ಮುನ್ನ ದಿನ ಮೇ 9 ರಂದು ಚಾಮುಂಡಿ ತಾಯಿಗೆ ಶಕ್ತಿ ಕೊಡು ಎಂದು ಬೇಡಿಕೊಂಡಿದ್ದೆವು. ಅದರಂತೆ ತಾಯಿ ನಮಗೆ ಶಕ್ತಿ ಕೊಟ್ಟಿದ್ದಾಳೆ. ಆದ್ದರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಮುನ್ನ, ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದೇವೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮರ್ಯಾದೆಗೇಡು ಹತ್ಯೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ- ಸಿಎಂ:''ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಸರ್ಕಾರವು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆದಿರುವ ಸುದ್ದಿ ನಮ್ಮೆಲ್ಲರ ಮನ ಕಲಕಿದೆ. ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳ ಹೀನ ಮನಸ್ಥಿತಿಯನ್ನು ಇಂತಹ ಘಟನೆಗಳು ಪ್ರತಿಫಲಿಸುತ್ತವೆ'' ಎಂದಿದ್ದಾರೆ.
''ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಸರ್ಕಾರವು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಿದೆ'' ಎಂದು ತಿಳಿಸಿದ್ದಾರೆ. ''ಮರ್ಯಾದೆಗೇಡು ಹತ್ಯೆಗಳನ್ನು ಮಾಡುವಂತಹ ಮನಸ್ಥಿತಿಯನ್ನು ಸೃಷ್ಟಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಕಾಲಿರಿಸಲು ಅವಕಾಶವನ್ನು ನೀಡದಂತಹ ಆಚರಣೆ, ಸಂಪ್ರದಾಯಗಳು ನಮ್ಮಲ್ಲಿವೆ'' ಎಂದು ವಿವರಿಸಿದ್ದಾರೆ.
ಜಾತಿ ಸಂರಚನೆಯ ಕಟ್ಟುಪಾಡುಗಳನ್ನು ಮೀರಲು ಮಾನವೀಯತೆ, ವಿಚಾರಪರತೆಯೇ ದಾರಿ. ಜಾಗೃತಿಯೇ ಅಸ್ತ್ರ, ಸಮಾಜವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲ ಸಮಾಜ ಸುಧಾರಕರ ಆಶಯಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದ ಸಿಎಂ, ಡಿಸಿಎಂ... ರಾಜ್ಯದ ರೈತರ ಹಿತದೃಷ್ಟಿಯಿಂದ ಸುಪ್ರೀಂನಲ್ಲಿ ರಾಜ್ಯದ ವಾದ ಮಂಡನೆ: ಡಿಕೆಶಿ