ಮೈಸೂರು: ಯಡಿಯೂರಪ್ಪ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಅವರು ಕೃತಜ್ಞತೆ ಇಲ್ಲದ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕೆಲವು ಸ್ನೇಹಿತರಿಗೆ ಸಚಿವ ಸ್ಥಾನ ಸಿಕ್ಕಿದ್ದು, ತುಂಬಾ ಸಂತೋಷವಾಗಿದೆ. ಅವರಿಂದ ರಾಜ್ಯಕ್ಕೆ ಉತ್ತಮ ಕೆಲಸವಾಗಲಿ ಎಂದರು.
ಬಿಎಸ್ವೈ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ ಸಿಎಂ ಯಡಿಯೂರಪ್ಪನವರು ಮಾತಿನ ಮೇಲೆ ನಿಲ್ಲುವ ನಾಯಕ ಎಂದುಕೊಂಡಿದ್ದೆ. ಆದ್ರೆ ಅದೆಲ್ಲವೂ ಹುಸಿಯಾಗಿದೆ. ಯಾವ ನಾಯಕರಿಗೂ ಕೃತಜ್ಞತೆ ಇಲ್ಲ. ಸಿಎಂ ಹಾಗೂ ಅವರ ಮಗನಿಗೂ ಕೃತಜ್ಞತೆ ಇಲ್ಲ. ಅವರು ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ಯಡಿಯೂರಪ್ಪನವರು ನಮ್ಮನ್ನು ನೆನೆದುಕೊಳ್ಳಬೇಕು. ಇಲ್ಲದಿದ್ದರೆ ಸಿದ್ಧಲಿಂಗೇಶ್ವರ ಒಳ್ಳೆಯದನ್ನು ಮಾಡಲ್ಲ ಎಂದು ಎಚ್. ವಿಶ್ವನಾಥ್ ಬೇಸರ ಹೊರ ಹಾಕಿದ್ದಾರೆ.
15 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ:
15 ಜನರ ಭಿಕ್ಷೆ ಮರ್ಜಿಯಲ್ಲಿ ನೀವಿದ್ದೀರಿ, ಅದನ್ನು ನೀವು ನೆನಪಿಸಿಕೊಳ್ಳಬೇಕು. 13 ವೀರಶೈವರು ಸಂಪುಟದಲ್ಲಿದ್ದಾರೆ. ಅಂದರೆ ಶೇ 44ರಷ್ಟಾಯಿತು. ಶೇ 37ರಷ್ಟು ಒಕ್ಕಲಿಗರಿದ್ದಾರೆ. 4 ಜನ ಕುರುಬರಿದ್ದಾರೆ. ಈ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದರು.
ಓದಿ: ಸಚಿವ ನಾಗೇಶ್ಗೆ ಕೋಕ್.. ಬಿಎಸ್ವೈ ಸಂಪುಟ ಸೇರಿದ ಸಪ್ತ ಸಚಿವರು..
ಯೋಗೇಶ್ವರ್ ವಿರುದ್ಧ ಗುಡುಗಿದ ಹಳ್ಳಿಹಕ್ಕಿ:
ಮುನಿರತ್ನ ಮತ್ತು ತನ್ನ ಮೇಲೆ ಕೋರ್ಟ್ನಲ್ಲಿ ಕೇಸ್ ಇದೆ ಎಂದು ಸಚಿವ ಸ್ಥಾನ ನೀಡಿಲ್ಲ. ಕೇಸ್ಗೂ, ಸಚಿವ ಸ್ಥಾನ ನೀಡುವುದಕ್ಕೂ ಸಂಬಂಧ ಇಲ್ಲ. ಸಮ್ಮನೇ ಹುಯಿಲೆಬ್ಬಿಸಬೇಡಿ. ಮಂತ್ರಿಸ್ಥಾನ ಕೊಟ್ಟಿರುವ ಯೋಗಿಶ್ವರ್ ಮೇಲೆ 420 ಕೇಸ್ ಇದೆ. ಅವನು ಸಾವಿರಾರು ಜನಕ್ಕೆ ವಂಚನೆ ಮಾಡಿದ್ದಾನೆ. ಅವನೇನು ರಾಜೀನಾಮೆ ಕೊಟ್ಟವನಲ್ಲ. ಅವನು ನಮ್ಮ ಬ್ಯಾಗ್ಗಳು ಹಿಡಿದುಕೊಂಡು ಓಡಾಡಿದವನು. ರಾಜೀನಾಮೆ ಕೊಟ್ಟ ನಾಗೇಶ್ನನ್ನು ಮಂತ್ರಿಸ್ಥಾನದಿಂದ ಕಿತ್ತು ಹಾಕುತ್ತೀರಿ, ಮುನಿರತ್ನನನ್ನು ಮಂತ್ರಿ ಮಾಡಲ್ಲ, ಇದು ನ್ಯಾಯ ಅಲ್ಲ. ಇದನ್ನೆಲ್ಲ ಜನ ಗಮಸುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
ಸಿಎಂ ಗೊತ್ತಿದ್ದೇ ಎಲ್ಲವನ್ನು ಮಾಡುತ್ತಿದ್ದಾರೆ:
ಸಿಎಂ ಯಡಿಯೂರಪ್ಪಮನವರು ಯಾರ ಕೈಗೊಂಬೆಯೂ ಅಲ್ಲ. ಗೊತ್ತಿದ್ದೇ ಎಲ್ಲವನ್ನು ಮಾಡುತ್ತಿದ್ದಾರೆ. ಹಾಗಾದರೆ ಸೈನಿಕನ ಕೈಗೊಂಬೆನಾ ಇವರು, ಯಾರು ಈ ಸೈನಿಕ?,ಪಕ್ಷ ವಿರೋಧಿ ಚಟುವಟಿಗಳಲ್ಲಿ ತೊಡಗಿದ್ದನು. ನಾನು ಹುಣಸೂರಲ್ಲಿ ಚುನಾವಣೆಗೆ ನಿಂತಾಗ ನನ್ನ ಸೋಲಿಗೆ ಅವನೇ ಕಾರಣ, ಕೊಟ್ಟ ದುಡ್ಡನ್ನೆಲ್ಲ ಲಪಟಾಯಿಸಿಕೊಂಡು ಹೋದ. ನನ್ನ ಸೋಲಿಸಿದವರನ್ನು ಮಂತ್ರಿ ಮಾಡಿದ್ರಾ?, ಸಂತೋಷ್ ಮತ್ತು ಯೋಗಿಶ್ವರ್ ಸೇರಿಕೊಂಡು ಬ್ಲಾಕ್ಮೇಲ್ ಮಾಡಿದ್ರಾ ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಯಡಿಯೂರಪ್ಪ ಕುಟುಂಬದ ಜನರೆಲ್ಲ ತುಂಬಿಕೊಂಡಿದ್ದಾರೆ. ವಿಜಯೇಂದ್ರ ಅಪ್ಪನ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದರು.