ಮೈಸೂರು:ಕುರುಬರಿಗೆ ಸಿದ್ದರಾಮಯ್ಯ ನೋಡಿದರೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ಸಿದ್ದರಾಮಯ್ಯ ವೇದಿಕೆಗೆ ಬಂದಾಗೆಲ್ಲ ಶಿಳ್ಳೆ, ಚಪ್ಪಾಳೆ ಹೊಡಿತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಆದರೆ, ಸಮುದಾಯಕ್ಕಾಗಿ ಏನೂ ಮಾಡಿಲ್ಲ. ಕೆಲವೊಂದು ಸಮುದಾಯ ಭವನ, ಕಲ್ಯಾಣ ಮಂಟಪ ಮಾಡಿದ್ದಾರೆ ಅಷ್ಟೇ. ಸಮುದಾಯದ ಆರ್ಥಿಕವಾಗಿ ಮುಂದುವರಿಯೋದಕ್ಕೆ ನಿಮ್ಮ ಕೊಡುಗೆ ಏನು.? ಎಂದು ಸಿದ್ದರಾಮಯ್ಯ ಅವರನ್ನು ವಿಶ್ವನಾಥ್ ಪ್ರಶ್ನಿಸಿದರು.
ಕುರಿ ಮತ್ತು ಕಂಬಳಿ ವೃತ್ತಿಯ, ಸಮುದಾಯದ ಸ್ವತ್ತು, ಜಾತಿಯ ಸ್ವತ್ತಲ್ಲ:
ಹಾನಗಲ್ ಉಪ ಚುನಾವಣೆ ಮತ ಕೇಳುವಾಗ ಕುರುಬರು, ಕಂಬಳಿ ಸೇರಿದಂತೆ ಬೇಡವಾದ ವಿಚಾರ ಪ್ರಸ್ತಾಪವಾಗುತ್ತಿದ್ದು, ಬೇಡವಾದ ವಿಚಾರಗಳೇ ಜನರನ್ನು ಕೆಣಕ್ತಿರೋದು ಚುನಾವಣೆಗೆ, ರಾಜಕಾರಣಿಗಳಿಗೆ ಶೋಭೆ ತರುವಂತಹದ್ದಲ್ಲ. ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರುತ್ತಾರೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದಲ್ಲ.
ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ, ಏಕ ವಚನದಲ್ಲಿ ಮಾತಾಡುತ್ತಿರೋದು ಯಾರಿಗೂ ಶೋಭೆ ತರವಂತಹದ್ದಲ್ಲ. ಜನ ಸಾಂಪ್ರದಾಯವಾಗಿ ಕಂಬಳಿ ಹೊದಿಸಿದ್ದನ್ನ ಪ್ರಶ್ನೆ ಮಾಡೋದು ಬಹಳ ಸಣ್ಣತನ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ನೀವೂ ಕೂಡ ಮುಖ್ಯಮಂತ್ರಿ ಆಗಿದ್ದವರು. ನಿಮಗೆ ಕುರುಬ ಜನಾಂಗ ಸೇರಿದಂತೆ ಎಲ್ಲ ಜನಾಂಗದವರು ಮತ ಹಾಕಿದ್ದಾರೆ. ಆದರೆ, ನೀವು ಹಾಗೆ ಮಾತನಾಡುತ್ತಿರೋದು ಸಮುದಾಯಕ್ಕೆ ಶೋಭೆ ತರುವಂತಹದ್ದಲ್ಲ. ಮುಖ್ಯಮಂತ್ರಿ, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡೋದು ಸಭ್ಯ ಸಮಾಜದಲ್ಲಿ ಸಣ್ಣತನ ಎಂದ್ರು. ಪ್ರಪಂಚದಲ್ಲಿ ಕುರಿಯನ್ನು ಹೆಚ್ಚು ಸಾಕೋದು ಯುರೋಪ್, ಎರಡನೇಯದ್ದು ಭಾರತ.
ಯುರೋಪ್‌ನಲ್ಲಿ ಅದು ಬಹು ಮುಖ್ಯ ಉದ್ಯಮ. ಆದರೆ, ಭಾರತ ದೇಶದಲ್ಲಿ ಅದನ್ನು ಸಂಕುಚಿತ ಮಾಡಿ ಒಂದು ಜಾತಿಗೆ ಸೀಮಿತ ಮಾಡಲಾಗಿದೆ. ಸಿದ್ದರಾಮಯ್ಯ ಸಂಕುಚಿತ ಆದಂತೆ ಕುರುಬರು ಏಕಾಂಗಿಗಳಾಗುತ್ತಾರೆ. ಇದರ ಅಪಾಯ ಮನಗಂಡು ಎಚ್ಚರಿಕೆಯಿಂದ ಮಾತನಾಡಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.