ಮೈಸೂರು :ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ನಿರಾಕರಿಸಿದ ಹೈಕಮಾಂಡಿಗೆ ನನ್ನ ಸೆಲ್ಯೂಟ್. ಟಿಕೆಟ್ ನೀಡದಿರುವುದು ಬಿಜೆಪಿಗೆ ಒಳ್ಳೆಯದೇ ಆಯ್ತು ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ ಹೈಕಮಾಂಡಿಗೆ ನನ್ನ ಸೆಲ್ಯೂಟ್. ಅವನಿಗೆ ಟಿಕೆಟ್ ನೀಡದಿರುವುದು ಒಳ್ಳೆಯದೇ ಆಯ್ತು, ಬೇಕಿದ್ದರೆ ಚುನಾವಣೆಯಲ್ಲಿ ಗೆದ್ದು ಬರಲಿ, ಕಳೆದ ಬಾರಿ ಬಂದಿದ್ದಂತೆ ಮುಂದೆಯೂ ವರುಣಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ವಿಜಯೇಂದ್ರ ಇಲ್ಲದೇ ಬಿಜೆಪಿ ಇಲ್ಲವೋ? ನಿಮ್ಮಪ್ಪನ ಜೈಲಿಗೆ ಕಳುಹಿಸಿದ್ದು ಯಾರು? ನಿಮ್ಮಪ್ಪ ಅಧಿಕಾರದಿಂದ ಇಳಿಯಲು ನೀನೇ ಕಾರಣ ಅಲ್ಲವಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯಕ್ರಮ ರದ್ದುಗೊಳಿಸಿ :ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಪಠ್ಯಕ್ರಮವನ್ನು ಕೂಡಲೇ ರದ್ದುಗೊಳಿಸಬೇಕು. ಕಳೆದ ಬಾರಿಯ ಪಠ್ಯಕ್ರಮವನ್ನೇ ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಸರ್ವರೂ ಒಪ್ಪುವ ಪಠ್ಯಕ್ರಮವನ್ನು ಜಾರಿಗೆ ತರಬೇಕು. ವಿವಿಧ ವಲಯಗಳ ತಜ್ಞರು ಹಾಗೂ ಪೋಷಕರನ್ನ ಒಳಗೊಂಡ ಸಮಿತಿ ರಚಿಸಿ ನೂತನ ಪಠ್ಯಕ್ರಮವನ್ನು ಅಳವಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಸರ್ವಸಮ್ಮತವಾಗಿರಬೇಕು. ಜನತಾಂತ್ರಿಕವಾಗಿರಬೇಕು. ಜಾತ್ಯತೀತವಾಗಿರಬೇಕು. ಆದರೆ, ಇಡೀ ಶೈಕ್ಷಣಿಕ ಕ್ಷೇತ್ರವನ್ನೇ ಮಲಿನಗೊಳಿಸುವ ಹುನ್ನಾರ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣ ಮಾಡಲಾಗುತ್ತಿದೆ. ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.