ಮೈಸೂರು :ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನ ಆಹ್ವಾನಿಸಿದ್ದೇವೆ. ಅವರು ನಮ್ಮ ಜೊತೆ ಇರುತ್ತಾರೆ. ಈ ಹೋರಾಟಕ್ಕೆ ಅವರ ವಿರೋಧ ಇಲ್ಲವೆಂದು ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿದರು.
ಎಸ್‌ಟಿ ಹೋರಾಟಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಹೆಚ್.ವಿಶ್ವನಾಥ್ ಮಾತನಾಡಿದರು.. ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ, ಹೆಚ್ ಎಂ ರೇವಣ್ಣ, ಕೆ ಎಸ್ ಈಶ್ವರಪ್ಪ, ಹೆಚ್ ವಿಶ್ವನಾಥ್ ಹಾಗೂ ಮುಂದಾದ ರಾಜಕೀಯ ನಾಯಕರ ವಿಚಾರದ ಪ್ರಶ್ನೆಯಲ್ಲ. ಹೊರತಾಗಿ ಇಡೀ ಕುರುಬ ಸಮುದಾಯದ ಪ್ರಶ್ನೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆಗಳು, ಪಕ್ಷಗಳ ಬೆಂಬಲ ಕೇಳಿದ್ದೇವೆ. ಇದರಲ್ಲಿ ಆರ್ಎಸ್ಎಸ್ ಸಹ ಇದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಹೋರಾಟಕ್ಕೆ ಬೆಂಬಲ ಕೇಳುತ್ತೇವೆ ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹೋರಾಟದ ವಿಚಾರದಲ್ಲಿ ಆರ್ಎಸ್ಎಸ್ ಕುಮ್ಮಕ್ಕಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡದ ಅವರು, "ಆರ್ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ?ಆರ್ಎಸ್ಎಸ್ ಅಂದರೆ ಮೈಲಿಗೆ ಏಕೆ? ಆರ್ಎಸ್ಎಸ್, ಯೂಥ್ ಕಾಂಗ್ರೆಸ್, ಯುವ ಜನತಾದಳದ ಯುವ ಮೋರ್ಚಾಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್ಎಸ್ಎಸ್ ಬಗ್ಗೆ ಏಕೆ ಹೇಳಬೇಕು ಎಂದರು.
ಇನ್ನು, ಡಿ.29ರಂದು ಮೈಸೂರಿನಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿರೋದಾಗಿ ಹೇಳಿದರು.