ಮೈಸೂರು : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚು ಟೋಲ್ ಸಂಗ್ರಹಿಸುತ್ತಿರುವ ನೀತಿ ಮತ್ತು ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ವಿರೋಧಿಸಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆಯ ಹತ್ತಿರದ ಸರ್ಕಲ್ ಬಳಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಒಂದು ಗಂಟೆಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆಸಿ, ಕೂಡಲೇ ಟೋಲ್ ದರ ಮರು ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, "ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ 12 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದ್ದು, ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಲ್ಲ. ಹೆಚ್ಚು ಟೋಲ್ ದರ ನಿಗದಿ ಮಾಡಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೂಡಲೇ ಟೋಲ್ ದರವನ್ನು ಪರಿಶೀಲನೆ ನಡೆಸಬೇಕು" ಎಂದು ಆಗ್ರಹಿಸಿದರು.
"ಸಾರ್ವಜನಿಕರು ಯಾರು ದುಬಾರಿ ಬೆಲೆಯ ಹೆದ್ದಾರಿ ಬೇಕೆಂದು ಕೇಳಿರಲಿಲ್ಲ. ಅದರೂ, ಹಗಲು ದರೋಡೆಗಾಗಿ ಈ ದಶಪಥ ಹೆದ್ದಾರಿಯನ್ನ ನಿರ್ಮಾಣ ಮಾಡಲಾಗಿದೆ. ಹೆದ್ದಾರಿಯಲ್ಲಿ ಯಾವುದೇ ಭದ್ರತೆ ಇಲ್ಲ. ಈಗಾಗಲೇ ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಯಾರು ಹೊಣೆ, ಹೆದ್ದಾರಿಯಲ್ಲಿ ಯಾವುದೇ ತುರ್ತು ಚಿಕಿತ್ಸಾ ಕೇಂದ್ರಗಳು ಇಲ್ಲ ಹಾಗೂ ಹೆದ್ದಾರಿ ಪಕ್ಕದಲ್ಲಿ ಎಲ್ಲಿಯೂ ಸಹ ರೆಸ್ಟ್ ರೂಮ್ಗಳು, ಹೋಟೆಲ್ಗಳು ಇಲ್ಲ" ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ