ಮೈಸೂರು:ನಾನು ಹಾಳಾಗಿದ್ದು ಸಿದ್ದರಾಮಯ್ಯನನ್ನು ಉದ್ದಾರ ಮಾಡಲು ಹೋಗಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ನಿನ್ನನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆದು ಕೊಂಡು ಬಂದೆ ನಿನ್ನನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ ಎಂದು ಕಿಡಿಕಾರಿದರು.
ನೀನೇನು (ಸಿದ್ದರಾಮಯ್ಯ) ದೇವರಾಜ ಅರಸು, ಕೆಂಗಲ್ ಹನುಮಂತಯ್ಯ ಅವರಿಗಿಂತ ದೊಡ್ಡ ನಾಯಕನಲ್ಲ. ಅವರ ಅವಧಿಯಲ್ಲಿ ಆದ ಅಭಿವೃದ್ಧಿಗಳು ದೊಡ್ಡವು. ನಾನು ನಾನು ಅನ್ನೋ ದುರಹಂಕಾರ, ದರ್ಪ ನಿಮ್ಮನ್ನ ಎಲ್ಲಿಗೆ ತಗೊಂಡು ಹೋಗಿದೆ ಎಂದು ಕುಟುಕಿದರು. ದರ್ಪ ದುರಹಂಕಾರದಿಂದಲೇ ಸಿದ್ದರಾಮಯ್ಯ 130 ರಿಂದ 70 ರಷ್ಟು ಸೀಟ್ಗೆ ಬಂದಿದ್ದಾರೆ. ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೇ? ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನಾ ನೀವು? ಎಂದು ಪ್ರಶ್ನಿಸಿದರು. ಇನ್ನೂ ಎರಡೂವರೆ ವರ್ಷ ಇದೆ, ಜನರು ಯಾರಿಗೆ ಆಶೀರ್ವಾದ ಮಾಡ್ತಾರೆ ಯಾರಿಗೆ ಗೊತ್ತು? ಸುಮ್ಮನೆ ಯಾಕೆ ಬೊಂಬಡಿ ಹೋಡಿತಿರಾ ಎಂದು ವಾಗ್ದಾಳಿ ನಡೆಸಿದರು.
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ 260 ಕೋಟಿ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಕೊಟ್ಟಿದ್ದು ಕೇವಲ 10ಕೋಟಿ ರೂ. ಮಾತ್ರ. ಕೇವಲ ಬಜೆಟ್‌ನಲ್ಲಿ ಹೇಳಿ ಹೋದರೆ ಆಗಲಿಲ್ಲ. ಮೇಲಾಗಿ ಅದಕ್ಕಾಗಿ ಹಣವನ್ನು ಮೀಸಲಿಡಬೇಕಿತ್ತು. ಎಫ್‌ಡಿ ಹಣ ಮೀಸಲಿಟ್ಟು ಮಾತನಾಡಬೇಕಿತ್ತು. ಅದು ಬಿಟ್ಟು ನಾನೇ ಜನಾಂಗವನ್ನು ಉದ್ಧಾರ ಮಾಡಿದೆ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಕುರುಬರಿಗೆ ಆದ ಅನ್ಯಾಯ ಯಾವಾಗಲೂ ಆಗಿಲ್ಲ, ಅಧಿಕಾರದ ಕೊನೆಯಲ್ಲಿ ಸಿಕ್ಕ ಸಿಕ್ಕದ್ದಕ್ಕೆ ಹಣ ಕೊಟ್ಟು ಹೋದ್ರು. ನಿಮಗೆ ಗೊತ್ತಿತ್ತು ನೀವು ವಾಪಸ್ ಬರೋದಿಲ್ಲ ಅಂತಾ ಎಂದು ಕುಟುಕಿದರು.
ಅಧಿಕಾರಕ್ಕೆ ಬಂದ್ರೆ 10 ಕೆ.ಜಿ. ಅಕ್ಕಿ ಕೊಡ್ತೀನಿ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರ ಮಾತನಾಡಿ, ಅಕ್ಕಿ ಕೊಡ್ತೀನಿ ಅನ್ನೋದೆ ನಿಮ್ಮ ಆಡಳಿತನಾ? ಇದನ್ನ ಆಡಳಿತ ಅಂತಾ ಹೇಳ್ತಾರಾ? ಸರ್ಕಾರಿ ಹಣದ ವೆಚ್ಚಕ್ಕೆ ಎಲ್ಲೂ ಕಡಿವಾಣ ಇಲ್ಲ ಎಂದರು. ಕರ್ನಾಟಕದಲ್ಲಿ ಶೇ.85ರಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂದರೆ, ಕರ್ನಾಟಕ ರಾಜ್ಯ ಯಾವ ಅಭಿವೃದ್ಧಿ ಪಥದಲ್ಲಿ ಇದೆ ಸಿದ್ದರಾಮಯ್ಯ? ಇದನ್ನು ಯಾರು ಕೇಳುವವರಿಲ್ಲವಾ? ಎಂದು ಪ್ರಶ್ನಿಸಿದ್ರು.