ಮೈಸೂರು:ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ವಿಕೇಂದ್ರೀಕರಣ ಆಗಿದೆ ಎಂದು ಹರಿಹಾಯ್ದರು.
ಇದೆಲ್ಲವು ಪರ್ಸೆಂಟೇಜ್ಗಾಗಿ ಮಾಡಿಕೊಂಡಿರೋದು. ಕೊರೊನಾ ವಿಚಾರದಲ್ಲಿ ಡಿಸಿಗಳಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ. ಜಿಲ್ಲಾ ಮಂತ್ರಿಗೆ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನೆ ಕೂತ್ತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಕಿಡಿಕಾರಿದರು.
ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳುತ್ತ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಕೊರೊನಾದಿಂದ ಮುಕ್ತಗೊಳಿಸಿ ಎಂದರು.
ರಾಜ್ಯಕ್ಕೆ ಅನುಭವಿ ಐಎಎಸ್ ಅಧಿಕಾರಿಗಳು ಬೇಕಾಗಿದ್ದಾರೆ. ಸರ್ಕಾರದ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿಗಳನ್ನ ಬಳಕೆ ಮಾಡಿಕೊಳ್ಳಿ. ಅವರನ್ನ ಪ್ರತಿ ಜಿಲ್ಲೆಗೆ ನಿಯೋಜನೆ ಮಾಡಿ. ಅವರಿಗೆ ಈಗಾಗಲೇ ಸಾಕಷ್ಟು ಅನುಭವ ಇರುತ್ತೆ. ಕೊರೊನಾ ನಿರ್ವಹಣೆಗೆ ಅವರಿಗೆ 100 ಕೋಟಿ ರೂ. ನೀಡಿ. ಸಂಪೂರ್ಣವಾದ ಫೈನಾನ್ಸ್ ಅಧಿಕಾರ ಕೊಡಿ. ಒಂದು ಸಾವು ಆಗದಂತೆ ಅವರಿಗೆ ಎಚ್ಚರಿಕೆ ನೀಡಿ. ಅವರಿಗೆ ಪರಮಾಧಿಕಾರದ ಜೊತೆಗೆ ಆಡಳಿತದಲ್ಲಿ ಫ್ರೀ ಹ್ಯಾಂಡ್ ಕೊಡಿ. ಇದರಿಂದ ಕೋವಿಡ್ ಕಂಟ್ರೋಲ್ ಮಾಡಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಡಿಸಿ ಇರಲಿ, ಆದರೆ ಅವರ ಮೇಲೆ ಸರ್ಕಾರದ ಕಾರ್ಯದರ್ಶಿಗಳಿರಲಿ. ಅವರಿಗೆ ಈಗ ಬೇರೆ ಕೆಲಸ ಇಲ್ಲ. ಅವರು ಬಂದು ಇಲ್ಲಿ ಕೂತರೆ ಕೆಲಸ ಆಗುತ್ತೆ. ಅವರಿಗೆ ವಿಶೇಷವಾದ ಅಧಿಕಾರ ಇರುತ್ತೆ ಎಂದರು.
ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್‌ಡೌನ್ ಮಾಡಿ: ಮೈಸೂರು ಡಿಸಿ ಬೆಳಗ್ಗೆ 6ರಿಂದ 8ರವರೆಗೆ ವ್ಯಾಪಾರಕ್ಕೆ ಅವಕಾಶ ಕೊಡುತ್ತೇನೆ ಅಂತಾರೆ. ದಿನವೂ ಏಕೆ ಅಂಗಡಿ ತೆಗಿಯಬೇಕು. ಮಾಂಸದ ಅಂಗಡಿ ಬಳಿ ಜನಜಂಗುಳಿ ಸೇರುತ್ತಿದೆ. ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಸತ್ತು ಹೋಗುತ್ತಾರಾ? ವಾರಕ್ಕೆ ಒಂದು ದಿನ ಮಾತ್ರ ಅವಕಾಶ ಕೊಟ್ಟು ಲಾಕ್‌ಡೌನ್ ಮಾಡಿ ಎಂದು ಸಲಹೆ ನೀಡಿದರು.