ಮೈಸೂರು: ಮುಖ್ಯಮಂತ್ರಿಯನ್ನು ಸೋಲಿಸಿದವರನ್ನೇ ಮುಖ್ಯಮಂತ್ರಿ ಮಾಡಬೇಕಿತ್ತು. ನಾವು ತಪ್ಪು ಮಾಡಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ, ಮುಖ್ಯಮಂತ್ರಿ (ಸಿದ್ದರಾಮಯ್ಯ)ಯನ್ನು ಸೋಲಿಸಿ ಬಂದಾಗ ಅವರು ಮೊದಲೇ ಕೇಳಿದ್ದರೆ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡಬಹುದಿತ್ತು. ಕಾಯಿಲೆಗೆ ಔಷಧಿ ಕೊಡಬಹುದು. ಆದ್ರೆ ನಟನೆ ಮಾಡಿದ್ದಾರೆ, ಅದಕ್ಕೆ ಹೇಗೆ ಔಷಧಿ ಕೊಡುವುದು ಎಂದು ಕುಟುಕಿದರು.
ರಾಜ್ಯ ರಾಜಕಾರಣದಲ್ಲಿ ನಾನು ಪಕ್ಷದಲ್ಲಿ ಇರುವವರೆಗೂ ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತೇ ಇಲ್ಲ. ಪಕ್ಷದ ಚಿನ್ಹೆಯಿಂದ ಚುನಾವಣೆಗೆ ನಿಂತರು. ನನ್ನ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿದ್ದರು. ಸರ್ಕಾರ ಹೋದ್ಮೇಲೆ ಅವರೇ ಸಾರ್ವಜನಿಕವಾಗಿ ನನ್ನ ತೀರ್ಮಾನ ಅಂತ ಹೇಳಿದ್ದಾರೆ. ಅಂತಹ ವ್ಯಕ್ತಿಗಳು ನಮ್ಮ ಪಕ್ಷಕ್ಕೆ ಮತ್ತೆ ಬರುವುದು ಬೇಡ ಎಂದು ಕಿಡಿಕಾರಿದರು.