ಮೈಸೂರು: ಸಚಿವ ಉಮೇಶ್ ಕತ್ತಿ ನನ್ನ ಒಳ್ಳೆಯ ಸ್ನೇಹಿತ. ಆದರೆ, ಅವರು ಬುದ್ಧಿ ಇಲ್ಲದ ಅವಿವೇಕಿ ಎಂದು ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿರುವುದು ಸರಿಯಲ್ಲ.
ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ ಅವರ ವಿರುದ್ಧ ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪನವರು ವಾಗ್ದಾಳಿ ನಡೆಸಿರುವುದು.. ಮಾಡಲು ಏನೂ ಕೆಲಸ ಇಲ್ಲದೇ ಏನೇನೋ ಹೇಳುತ್ತಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡಲಿ. ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಇಲ್ಲೇ ಆಗಲಿ. ಅದಕ್ಕೆ ಪ್ರತ್ಯೇಕ ರಾಜ್ಯ ಏಕೆ ಬೇಕು ಎಂದು ಕಿಡಿಕಾರಿದರು. ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ಸೃಷ್ಟಿಯಾಗಿದೆ. ಅದನ್ನು ಪದೇಪದೆ ಒಡೆಯುವ ರೀತಿ ಮಾತನಾಡಬೇಡಿ ಎಂದರು.
ಇನ್ನು ಪರಿಷ್ಕೃತ ಪಠ್ಯಕ್ರಮ ವಾಪಸ್ ಪಡೆಯುವುದಿಲ್ಲವೆಂಬ ಸರ್ಕಾರದ ನಿಲುವು ಸರಿಯಲ್ಲ. ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನಾಭಿಪ್ರಾಯಕ್ಕೆ ಈ ಸರ್ಕಾರದಲ್ಲಿ ಯಾವುದೇ ಬೆಲೆಯಿಲ್ಲ. ಇದು ಕೋಮುವಾದದ ಅಫೀಮನ್ನು ಪುಸ್ತಕದಲ್ಲಿ ಸೇರಿಸುವ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಣೆ: ಆಕ್ಷೇಪಣೆಗೆ 15 ದಿನ ಅವಕಾಶ
ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಸಾಮಾಜಿಕ ನ್ಯಾಯದ ಸಂಕೇತವಲ್ಲ. ಪ್ರಧಾನಿ ಹುದ್ದೆ, ರಾಷ್ಟ್ರಪತಿ ಹುದ್ದೆ ಹಾಗೂ ಮುಖ್ಯಮಂತ್ರಿ ಹುದ್ದೆಗಳನ್ನು ಜಾತಿಯಿಂದ ನೋಡುವುದು ಸಂವಿಧಾನಕ್ಕೆ ಮಾಡುವ ಅಪಮಾನ. ಬಿಜೆಪಿ ಇದರಲ್ಲಿ ಜಾತಿ ನಮೂದಿಸುತ್ತಾ ಸಂವಿಧಾನಕ್ಕೆ ಅಗೌರವ ತೋರಿಸುತ್ತಿದೆ ಎಂದರು.