ಮೈಸೂರು: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕುರಿತು ವ್ಯಂಗ್ಯವಾಡುತ್ತಿರುವವರಿಗೆ ಸಚಿವ ಡಾ. ಎಚ್ ಸಿ. ಮಹಾದೇವಪ್ಪ ತಿರುಗೇಟು ಕೊಟ್ಟಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯಾದ್ಯಂತ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸಿದೆ ಎಂದರು.
ಮಹಿಳೆಯರಿಗೆ ನೀಡುತ್ತಿರುವ ಶಕ್ತಿ ಯೋಜನೆಯನ್ನು ವ್ಯಂಗ್ಯ ಮಾಡುತ್ತಿರುವವರು, ದೇಶದಲ್ಲಿ ಹಿಂದೂ ಕೋಡ್ ಬಿಲ್ ಬಂದಾಗ ಮಹಿಳೆಯರ ಸಬಲೀಕರಣ, ಮಹಿಳೆಯರಿಗೆ ಸಮಾನ ಅವಕಾಶ, ಸಮಾನ ವೇತನ, ಪುರುಷರಿಗೆ ಸಮಾನವಾದ ಸ್ಥಾನಮಾನ ಕೊಡಬೇಕು ಎಂದಾಗ ಯಾವ ಮನುವಾದಿಗಳು ವಿರೋಧ ಮಾಡಿದ್ದರೋ, ಅದೇ ಮನಸ್ಸಿನವರು ವ್ಯಂಗ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿ, ಸದ್ಯ ಕುಡಿಯುವ ನೀರಿನ ಅಭಾವ ಇಲ್ಲ, ಮುಖ್ಯಮಂತ್ರಿಗಳು ಮೊನ್ನೆ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ನಾನು ಪರಿಶೀಲನೆ ನಡೆಸಿ ಏನು ಮಾಡಬೇಕೆಂದು ಹೇಳುತ್ತೇನೆ. ಇನ್ನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲವೆಂದು ಆಡ್ಮಿಷನ್ಅನ್ನು ನಿರಾಕರಿಸಬಾರದು, ಇದನ್ನೆಲ್ಲ ಸರಿಪಡಿಸಿ ಸರಿಯಾಗಿ ವಿದ್ಯಾರ್ಥಿ ವೇತನ ಬರುವ ಹಾಗೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಟ್ಯಾಕ್ಸಿ ಮತ್ತು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಕ್ತಿ ಯೋಜನೆಯನ್ನು ಟ್ಯಾಕ್ಸಿ ಮತ್ತು ಆಟೋ ಚಾಲಕರನ್ನು ಗಮದಲ್ಲಿಟ್ಟುಕೊಂಡು ಮಾಡಿದ್ದಲ್ಲ. ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಬೇಕು ಎಂದು ಮಾಡಿದ್ದೇವೆ ಎಂದರು.
ಶಕ್ತಿ ಯೋಜನೆ ಇಡೀ ರಾಷ್ಟ್ರದಲ್ಲಿಯೇ ಹೊಸ ಯೋಜನೆ, ಇದು ಮಹಿಳಾ ಸಮುದಾಯದಲ್ಲಿ ಸಂಚಲ ಉಂಟುಮಾಡಿದೆ. ಸುಮಾರು ರಾಜ್ಯಾದ್ಯಂತ 40 ಲಕ್ಷ ಮುಕ್ತವಾಗಿ ಪ್ರವಾಸ, 11 ಲಕ್ಷ ಪಾಸ್ ಅವರಿಗೆ ಒಟ್ಟು 51ಲಕ್ಷ ಪ್ರಯಾಣಿಕರು ವಾರ್ಷಿಕವಾಗಿ ರಾಜ್ಯದ ಒಳಗಡೆ ಪ್ರವಾಸ ಮಾಡುತ್ತಾರೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರ್ಷಿಕವಾಗಿ 4 ಸಾವಿರದ 50 ಕೋಟಿ ರೂಪಾಯಿ ಖರ್ಚಾಗುತ್ತೆ. ಬೆಂಗಳೂರಿನಲ್ಲಿ ಗ್ರೂಪ್ ಡಿ ಮಹಿಳಾ ನೌಕರರರೊಬ್ಬರ ಅಭಿಪ್ರಾಯವನ್ನು ನನ್ನ ಸ್ನೇಹಿತರೊಬ್ಬರು ಕಳುಹಿಸಿ ಕೊಟ್ಟರು. ನನಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಬಸ್ನಲ್ಲಿ ಪ್ರಯಾಣಿಸಲು ಖರ್ಚಾಗುತ್ತಿತ್ತು. ಈಗ ಆ ಹಣ ಉಳಿತಯವಾಗಿರುವುದರಿಂದ ಅನುಕೂಲವಾಗಿದೆ ಎಂದು ಮಹಿಳೆಯೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.