ಮೈಸೂರು: ಹೊಸ ವರ್ಷಾಚರಣೆಗೆ ಮೈಸೂರು ನಗರದಲ್ಲಿ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ನಿಗದಿಪಡಿಸಿರುವ ಸಮಯವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂದು ರಾತ್ರಿ 7 ಗಂಟೆಗೆ ಚಾಮುಂಡಿ ಬೆಟ್ಟದ ಮುಖ್ಯದ್ವಾರವನ್ನು ಬಂದ್ ಮಾಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಹಾಗೂ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿರುವ ಸಮಯವನ್ನು ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ಮೆಂಟ್ ಅಸೋಸಿಯೇಷನ್, ಮಾಲ್, ಸಂಘ ಸಂಸ್ಥೆಗಳು ರಾತ್ರಿ ಒಂದು ಗಂಟೆಗೆ ಕಾರ್ಯಕ್ರಮ ಮುಗಿಸುವುದು ಕಡ್ಡಾಯ ಎಂದರು.
275 ಸಿಸಿಟಿವಿ ಅಳವಡಿಕೆ:ನ್ಯೂಇಯರ್ ನೆಪದಲ್ಲಿ ಅಸಭ್ಯ ವರ್ತನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ (ಚಾಮುಂಡಿ ಪಡೆ) ರಚಿಸಲಾಗಿದೆ. ನಗರದ ಪ್ರಮುಖ ಸ್ಥಳದಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ನಗರದಲ್ಲಿರುವ 59 ಸಿಸಿಟಿವಿ ಜೊತೆಗೆ 275 ಸಿಸಿಟಿವಿ ಅಳವಡಿಕೆ, ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು, ವೀಲಿಂಗ್, ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚಿಸಲಾಗಿದೆ.