ಮೈಸೂರು: ಶಿರಾ ಹಾಗೂ ಆರ್ಆರ್ ನಗರ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಜೆಡಿಎಸ್ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಉಪಚುನಾವಣೆ ಸಹವಾಸದಿಂದ ದೂರವೇ ಉಳಿದಿದ್ದಾರೆ.
ಸ್ವಪಕ್ಷೀಯ ಮುಖಂಡರ ವಿರುದ್ಧವೇ ಮುನಿಸಿಕೊಂಡಿರುವ ಜಿ.ಟಿ.ದೇವೇಗೌಡ, ಮೈಸೂರಿನ ಹುಣಸೂರು ಉಪಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಸ್ಪರ್ಧೆ ಮಾಡಿದ್ದರೂ ಒಮ್ಮೆಯೂ ಕೂಡ ಪ್ರಚಾರದ ಕಡೆ ಮುಖ ಮಾಡಿರಲಿಲ್ಲ.
ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಂತೆ ಮುಖಂಡರು ಎಚ್ಚರಿಕೆ ನೀಡಿದರೂ, ಜಿಟಿಡಿ ಮಾತ್ರ ತಮ್ಮ ಧೋರಣೆಯಿಂದ ಹಿಂದೆ ಸರಿಯಲಿಲ್ಲ. ಈ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವಲ್ಲಿ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರು.
ಇದೀಗ ಶಿರಾ, ಆರ್ಆರ್ ನಗರ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿದ್ದಿಗೆ ಬಿದ್ದು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಅಲ್ಲದೇ ಘಟಾನುಘಟಿ ನಾಯಕರ ದಂಡು ಠಿಕಾಣಿ ಹೂಡಿವೆ. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಯಾಗುತ್ತಿದ್ದರೂ ಜಿ.ಟಿ.ದೇವೇಗೌಡರು ಮಾತ್ರ ತಮ್ಮ ಮನಸ್ಸು ಬದಲಾಯಿಸದೇ ಯಾವ ಕ್ಷೇತ್ರದ ಕಡೆಯೂ ಮುಖ ಮಾಡದೆ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ನಂತರ ಪಕ್ಷದ ಕಾರ್ಯಕ್ರಮಗಳಿಂದ ದೂರ ಸರಿದಿರುವ ಜಿ.ಟಿ.ದೇವೇಗೌಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿತ್ತು.